ಗುತ್ತಿಗೆ ಆಧಾರಿತ ಕೃಷಿ: 2018ರಲ್ಲಿ ಹಣ ಪಡೆದು ಮಾಯವಾದ ಕಂಪನಿ : 200 ರೈತರಿಂದ ಆರೋಪ

ಕೇಂದ್ರ ಸರಕಾರ ಹೊರಡಿಸಿರುವ ಮೂರು ರೈತ ಮಸೂದೆಗಳಲ್ಲಿ  ಒಂದಾದ  Assurance and Farm Services Act 2020 ಅಡಿಯಲ್ಲಿನ ಗುತ್ತಿಗೆ ಆಧಾರಿತ ಕೃಷಿಯಿಂದಾಗುವ ತೊಂದರೆಗಳ, ನೈಜ ಉದಾಹರಣೆ ತೋರಿಸುವಂತಹ ಘಟನೆ ಈಗ ಮಧ್ಯಪ್ರದೇಶದ ಬೆಟುಲ್ ಜಿಲ್ಲೆಯಲ್ಲಿ ನಡೆದಿದೆ.ಜಲ್ಲೆಯಲ್ಲಿ ನೂರಾರು ರೈತರು 2018 ರಲ್ಲಿ ಗುತ್ತಿಗೆ ಆಧಾರಿತ ಕೃಷಿಗೆ ಖಾಸಗಿ ಕಂಪನಿಯೊಂದರ ಜೊತೆಗ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಕೆಲ ದಿನಗಳ ನಂತರ ಆ ಕಂಪನಿಯೂ ರೈತರ ಜೊತೆಗಿನ ಎಲ್ಲ ಸಂಪರ್ಕವನ್ನು ಕಡಿತಗೊಳಿಸಿದೆ. ಇದರಿಂದ ಸಂಕಷ್ಟಕ್ಕೊಳಗಾದ ರೈತರು ,ಕಂಪನಿಯ ವಿರುದ್ಧ ಕೇಸ್‌ ದಾಖಲಿಸಲು ಕೂಡ ಕಷ್ಟಪಡುತ್ತಿದ್ದಾರೆ

ಈಗಾಗಲೇ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಗುತ್ತಿಗೆ ಆಧಾರಿತ ಕೃಷಿಯ ವಿರುದ್ಧ ಧ್ವನಿಗಳು ಕೇಳಿ ಬರುತ್ತಿವೆ. ರೈತ ಮಸೂದೆಗಳ ಪ್ರಕಾರ ಒಂದು ವೇಳೆ ಗುತ್ತಿಗೆ ಮಾಡಿಕೊಂಡ ಕಂಪನಿಯ ಎಲ್ಲ ಷರತ್ತುಗಳನ್ನು ಪೂರೈಸುವಲ್ಲಿ ರೈತರು ವಿಫಲವಾದಲ್ಲಿ, ರೈತರನ್ನ ತಮ್ಮ ಜಮೀನುಗಳಿಂದ ಹೊರದಬ್ಬುವ ಕಾರ್ಯ ಆಗಲಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

UWEGO Agri Solutions Private Limited ಎಂಬ ಕಂಪನಿಯನ್ನು ರಾಜ್ಯದ ತೋಟಗಾರಿಕೆ ಇಲಾಖೆಯು ರೈತರಿಗೆ ಪರಿಚಯ ಮಾಡಿಸಿತ್ತು ಎಂದು ಬೆಟುಲ್‌ ಜಿಲ್ಲೆಯಲ್ಲಿ 5 ಎಕರೆ ಜಾಗ ಹೊಂದಿರುವ 30 ವರ್ಷದ ನದೀಮ್‌ ಖಾನ್‌ ತಿಳಿಸಿದ್ದಾರೆ. ನುಗ್ಗೆಕಾಯಿ ಬೆಳೆಯಲು ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡು ಸಸಿಗಳನ್ನು ಪಡೆದುಕೊಳ್ಳದ ಮತ್ತು ಸಸಿಗಳನ್ನು ಪಡೆದುಕೊಂಡರೂ ಫಸಲು ಸಿಗದ  ಸುಮಾರು  200 ರೈತರಲ್ಲಿ ನದೀಮ್‌ ಖಾನ್‌ ಕೂಡ ಒಬ್ಬರು

“ನಾನು 2018ರ ಸೆಪ್ಟೆಂಬರ್‌ನಲ್ಲಿ ರಾಜ್ಯದ ತೋಟಗಾರಿಕೆ ಇಲಾಖೆಯ ಶಿಫಾರಸ್ಸಿನ ಮೇಲೆ ನುಗ್ಗೆಕಾಯಿ ಬೆಳಯಲು ಕಂಪನಿಯೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದೆ. ಒಪ್ಪಂದದ ಪ್ರಕಾರ ಪ್ರತಿ ಎಕರೆಗೆ ಸಸಿಗಳನ್ನು ಖರೀದಿಸಲು 20,000 ರೂಪಾಯಿ ಕೊಡಬೇಕಾಗಿತ್ತು. ನಾನು ನನ್ನ ಎರಡು ಎಕರೆ ಜಮೀನಿಗೆ ಒಪ್ಪಂದ ಮಾಡಿಕೊಂಡು 40,000 ರೂಪಾಯಿಗಳನ್ನು ನೀಡಿದ್ದೆ. ಈ ಕಂಪನಿಯೂ  ನಮಗೆ ಸಸಿಗಳನ್ನು ಮತ್ತು ಕೃಷಿಗೆ ಬೇಕಾದ ಕೆಲವು ತಂತ್ರಾಂಶಗಳನ್ನು ನೀಡಿ ನಮ್ಮ ಫಸಲನ್ನು ಖರೀದಿಸುವುದಾಗಿ ಹೇಳಿತ್ತು. ಆದರೆ ನಾನು ಯಾವುದೇ ರೀತಿಯ ಸಸಿಗಳನ್ನು ಪಡೆದುಕೊಂಡಿಲ್ಲ. 2019ರ ಸೆಪ್ಟೆಂಬರ್‌ನಲ್ಲಿ ಜಿಲ್ಲಾಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಲಾಗಿತ್ತು. ತದನಂತರ ಹಲವು ಬಾರಿ ದೂರು ದಾಖಲಿಸಿದರೂ ಯಾವ ಕ್ರಮವು ಕೈಗೊಳ್ಳಲಾಗಿಲ್ಲ ಎಂದು ನದೀಮ್‌ ಖಾನ್‌ ತಿಳಿಸಿದ್ದಾರೆ.

.ತೋಟಗಾರಿಕೆ ಇಲಾಖೆಯು ಮಾಹಿತಿ ಪ್ರಕಾರ ಕಂಪನಿಯೂ 125 ಎಕರೆಗಳಷ್ಟು ಜಾಗದಲ್ಲಿ ನುಗ್ಗೆಕಾಯಿ ಬೆಳೆಯಲು ಒಪ್ಪಂದ ಮಾಡಿಕೊಂಡಿದ್ದು ಪ್ರತಿ ಎಕರೆಗ 20,000 ರೂಪಾಯಿಗಳನ್ನು ಪಡೆದುಕೊಂಡಿದೆ.

ಈ ಘಟನೆಗೆ ಪ್ರತಿಕ್ರಿಯಿಸಿದ ಕಾಂಗ್ರೇಸ್‌ ಈ ವಿಷಯಕ್ಕೆ ಸಂಬಂಧಪಟ್ಟಂತೆ ಕ್ರಿಮೀನಲ್‌ ಮೊಕದ್ದಮೆ ದಾಖಲಿಸುವಂತೆ ಕೋರಿಕೊಂಡಿದೆ. ಈ ಬಗ್ಗೆ ರಾಜ್ಯದ ಮಂತ್ರಿ ಕಮಲ್‌ ಪಟೇಲ್‌ರನ್ನ ವಿಚಾರಿಸಿದಾಗ ಶೀಘ್ರದಲ್ಲಿ ಆರೋಪಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗುವುದು ಆದರೆ ರೈತರ ಹಣ ಹಿಂದಿರುಗಿಸುವ ಭರವಸೆ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.

ವರದಿ: ಮಂಜುನಾಥ್‌ ಅಜಿತ್