ಕುರಿ ಕಾಯುತ್ತಿದ್ದ ಯುವಕ ಈಗ ಸಹಾಯಕ ಆಯುಕ್ತ !
ತನ್ನ ಒಂದು ಹೊತ್ತಿನ ಊಟಕ್ಕಾಗಿ ಕುರಿ ಹಾಗೂ ಕೂಲಿ ಕೆಲಸ ಮಾಡುತ್ತಿದ್ದ ಪಾವಗಡ ತಾಲ್ಲೂಕಿನ ವೀರ್ಲಗೊಂದಿ ಯುವಕ ಕೆಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾಗಿ ಬಡ ವಿದ್ಯಾರ್ಥಿಗಳ ಆದರ್ಶವಾಗಿದ್ದಾರೆ ಎಂದು ಅಧಿಕಾರಿಗಳು,ನಾಗರೀಕರು ಶ್ಲಾಘಿಸಿದ್ದಾರೆ.
ವೀರ್ಲಗೊಂದಿ ಗ್ರಾಮದ ಜೋಗಪ್ಪ ಹಾಗೂ ನಾಗಮ್ಮ ಎಂಬುವವರ ಪುತ್ರ ಜೆ.ಶಿವಕುಮಾರ್ ಇತ್ತೀಚೆಗೆ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ೩೯ ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ನೇಮಕಗೊಂಡಿರುವ ವಿಚಾರ ಹೊರಬೀಳುತ್ತಿದ್ದಂತೆ ಹೆಮ್ಮೆಯ ವಿಚಾರವೆಂದು ಸ್ವಗ್ರಾಮ ಮತ್ತು ತಾಲ್ಲೂಕಿನಲ್ಲಿ ಹರ್ಷ ವ್ಯಕ್ತವಾಗಿದೆ.
ಈ ಕುರಿತು ಶಿವಕುಮಾರ್ ಗುರುಗಳಾದ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್ ಮಾತನಾಡಿ, ನನ್ನ ಶಿಷ್ಯ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಆಯ್ಕೆಗೊಂಡಿರುವುದು ಅತೀವ ಸಂತೋಷ ತಂದಿದೆ.
ಕಡು ಬಡತನದಲ್ಲಿ ಬೆಳೆದು ಬಂದ ಯುವಕ,ಕಿತ್ತು ತಿನ್ನುವ ಬಡತನದ ಮಧ್ಯೆಯೂ ಶಾಲೆಗೆ ಕಡ್ಡಾಯವಾಗಿ ಆಗಮಿಸುತ್ತಿದ್ದರು .
ರಜೆ ಮತ್ತು ಬಿಡುವಿನ ವೇಳೆ ಕುರಿ ಕಾಯುವುದು ಮತ್ತು ಕೂಲಿ ಕೆಲಸ ಮಾಡುವುದು ಆತನ ಕಾಯಕವಾಗಿತ್ತು .
ಬಡತನದ ಮಧ್ಯೆ ವಿದ್ಯಾಭ್ಯಾಸ ಮಾಡುತ್ತಿದ್ದಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ .
ಕಷ್ಟಪಟ್ಟು ವ್ಯಾಸಂಗ ಮಾಡಿದರೆ ಎಂತಹ ಉನ್ನತ ಹುದ್ದೆಗಾದರೂ ಹೋಗಬಹುದು ಎನ್ನುವ ಭರವಸೆಗೆ ಶಿವಕುಮಾರ್ ಸಾಕ್ಷಿಯಾಗಿದ್ದಾರೆ.