ಪೇಜಾವರ ಮಠದ ಶ್ರೀಗಳು ಸಾಗಿ ಬಂದ ದಾರಿ....

1931ರ ಏಪ್ರಿಲ್ 27ರಂದು ಉಡುಪಿಯಿಂದ ಸುಮಾರು 120 ಕಿ.ಮೀ. ದೂರದ ಸುಬ್ರಮಣ್ಯ ಸಮೀಪದ ರಾಮಕುಂಜ ಎಂಬ ಹಳ್ಳಿಯಲ್ಲಿ ಜನಿಸಿದ ವಿಶ್ವೇಶ ತೀರ್ಥ ಸ್ವಾಮೀಜಿ, ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ 33ನೇ ಮಠಾಧೀಶರಾಗಿ ಸೇವೆ ಸಲ್ಲಿಸಿದ್ದರು.


ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಯ ಎರಡನೆಯ ಮಗನಾದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮೂಲ ಹೆಸರು ವೆಂಕಟರಮಣ. ಆರು ವರ್ಷದ ಬಾಲಕನಿದ್ದಾಗ ಅವರ ಪೋಷಕರು ಉಡುಪಿ ಪೇಜಾವರ ಮಠದ ಪರ್ಯಾಯಕ್ಕೆ ಕರೆದೊಯ್ದಿದ್ದರು. ಆಗಿನ ಪೇಜಾವರ ಮಠಾಧೀಶರಾದ ವಿಶ್ವಮಾನ್ಯ ತೀರ್ಥರಿಂದ ಪ್ರಭಾವಿತರಾಗಿ ತಮ್ಮ ಎಂಟನೇ ವಯಸ್ಸಿನಲ್ಲಿ ಹಂಪಿಯಲ್ಲಿ ದೀಕ್ಷೆ ಪಡೆದರು.ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ ವಿಶ್ವೇಶ ತೀರ್ಥ ಎಂಬ ಹೆಸರಿನೊಂದಿಗೆ ವೇದಾಂತ ಪೀಠವನ್ನೇರಿದ್ದರು. 1954ರಲ್ಲಿ ವಿಶ್ವೇಶ ತೀರ್ಥರು ಮೊದಲ ಪರ್ಯಾಯ ನಡೆಸಿದ್ದರು. ಸೋದೆ ಮಠದ ಶ್ರೀ ವಾದಿರಾಜ ಸ್ವಾಮೀಜಿಗಳ ಬಳಿಕ ಐದು ಪರ್ಯಾಯಗಳನ್ನು ನಡೆಸಿದ ಏಕೈಕ ಸ್ವಾಮೀಜಿ ಎನಿಸಿದ್ದಾರೆ.

ಉಡುಪಿಯ ಎಂಟು ಮಠಗಳ ಮಠಾಧೀಶರಲ್ಲಿಯೇ ಅತ್ಯಂತ ಪ್ರಭಾವಶಾಲಿಯಾಗಿದ್ದ ವಿಶ್ವೇಶ ತೀರ್ಥರು, ಜಾಗತಿಕ ಮನ್ನಣೆ ಗಳಿಸಿದ್ದರು. ರಾಜಕೀಯ, ಸಾಮಾಜಿಕ ವಿಚಾರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದರು.