ಜ.19ರಿಂದ 22ರವರೆಗೆ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮ

ಬಿಬಿಎಂಪಿಯು ನಗರದಾದ್ಯಂತ ಜ.19ರಿಂದ 22ರವರೆಗೆ ರಾಷ್ಟ್ರೀಯ ಪಲ್ಸ್‌ ಪೋಲಿಯೊ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪಾಲಿಕೆ ವ್ಯಾಪ್ತಿಯಲ್ಲಿನ 5.71 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ.

ಬೆಂಗಳೂರುನಗರದ 198 ವಾರ್ಡ್‌ಗಳ ಪೈಕಿ 135 ವಾರ್ಡ್‌ಗಳಲ್ಲಿಪಾಲಿಕೆಯ ಆರೋಗ್ಯ ಇಲಾಖೆ ಹಾಗೂ ಉಳಿದ 63 ವಾರ್ಡ್‌ಗಳಲ್ಲಿನಗರ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪೋಲಿಯೊ ಲಸಿಕೆ ಹಾಕಲಿದೆ.
ಈ ಬಗ್ಗೆ ಅರಿವು ಮೂಡಿಸಲು ಶುಕ್ರವಾರ ಜನ ಜಾಗೃತಿ ಜಾಥಾ ನಡೆಸಲಾಗುತ್ತಿದೆ. ಬಿಬಿಎಂಪಿ ಕೇಂದ್ರ ಕಚೇರಿಯಿಂದ ಬೆಳಗ್ಗೆ 8ಕ್ಕೆ ಹೊರಡುವ ಜಾಗೃತಿ ಜಾಥಾ ಹಡ್ಸನ್‌ ವೃತ್ತ, ಮಿಷನ್‌ ರಸ್ತೆ, ಸಂಪಂಗಿರಾಮನಗರ ಮಾರ್ಗವಾಗಿ ಸಾಗಿ ಮತ್ತೆ ವಾಪಸ್ಸಾಗಲಿದೆ. ಜಾಥಾಗೆ ಮೇಯರ್‌ ಎಂ.ಗೌತಮ್‌ಕುಮಾರ್‌ ಚಾಲನೆ ನೀಡಲಿದ್ದಾರೆ.

ಪಾಲಿಕೆಯ 135 ವಾರ್ಡ್‌ಗಳಲ್ಲಿ 58,85,535 ಜನರಿದ್ದು, ಈ ಪೈಕಿ ಐದು ವರ್ಷದೊಳಗಿನ 5,71,125 ಮಕ್ಕಳಿದ್ದಾರೆ. 501 ಕೊಳೆಗೇರಿ ಪ್ರದೇಶಗಳಲ್ಲಿ 1,88,924 ಮಕ್ಕಳಿದ್ದು, ಆಯಾ ವಾರ್ಡ್‌ಗಳಲ್ಲಿನ ಆರೋಗ್ಯ ಕೇಂದ್ರಗಳು, ಅಂಗನವಾಡಿ, ಶಾಲೆಗಳಲ್ಲಿ ಲಸಿಕೆ ಹಾಕಲಾಗುತ್ತದೆ. ಸಂಚಾರಿ ತಂಡಗಳು ಬಸ್‌, ರೈಲು, ಮೆಟ್ರೊ ನಿಲ್ದಾಣ, ಮಾಲ್‌ಗಳು, ಪ್ರಮುಖ ಉದ್ಯಾನಗಳು, ಕೊಳೆಗೇರಿ ಪ್ರದೇಶಗಳು, ಜನದಟ್ಟಣೆ ಪ್ರದೇಶಗಳಲ್ಲಿ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಿವೆ.