ಎಐಸಿಸಿಗೆ ಮತ್ತೆ ರಾಹುಲ್ ಸಾರಥ್ಯ...?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​​​ ಅಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ರಾಹುಲ್​​ ಗಾಂಧಿಯವರನ್ನೇ ಆಯ್ಕೆ ಮಾಡುವ ಮುನ್ಸೂಚನೆಗಳು ಸಿಕ್ಕಿವೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಿಲ್ಲದ ಕಾರಣ ರಾಹುಲ್​​​​ ಗಾಂಧಿಯವರನ್ನೇ ಆಯ್ಕೆ ಮಾಡಬೇಕೆಂಬ ಒತ್ತಾಯವೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಿಂದಲೇ ಕೇಳಿ ಬಂದಿದೆ. ಹಾಗಾಗಿ ಮುಂಬರುವ ಏಪ್ರಿಲ್​​​ ತಿಂಗಳಿನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆಗ ಮತ್ತೊಮ್ಮೆ ರಾಹುಲ್ ಗಾಂಧಿಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿಸುವ ಸಾಧ್ಯತೆಗಳಿವೆ.

ಇತ್ತೀಚೆಗೆ ಎಐಸಿಸಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಒತ್ತಾಯಿಸಿದ್ದರು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದ್ದರಿಂದ ಇತ್ತ ರಾಹುಲ್ ಗಾಂಧಿಯವರನ್ನೇ ಮರು ಆಯ್ಕೆ ಮಾಡಬಹುದು ಎಂದು ಕೆಲವರು ಪಟ್ಟು ಹಿಡಿದರೆ, ಅತ್ತ ಕಾಂಗ್ರೆಸ್ ಪಕ್ಷ ಮುನ್ನೆಡೆಸುವ ಸಾಮರ್ಥ್ಯ ಇದ್ದವರಿಗೆ ಅಧ್ಯಕ್ಷ ಗಾದಿ ನೀಡಿ ಎಂದು ಹಲವರು ಒತ್ತಾಯಿಸಿದ್ದಾರೆ.

ಇನ್ನು, ಈ ಮಧ್ಯೆ ಇದೇ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ರಣದೀಪ್ ಸುರ್ಜೇವಾಲ್, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮುಂದಿದೆ. ಸಮಿತಿ ಸದಸ್ಯರ ತೀರ್ಮಾನದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಮುನ್ನವೇ ಯಾವುದೇ ನಾಯಕರು ಈ ಬಗ್ಗೆ ಹೇಳಿಕೆ ನೀಡಬಾರದು ಎಂದು ಎಚ್ಚರಿಸಿದ್ದಾರೆ.