ಪಿಎಂ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಶಿರಾ ತಾಲೂಕು ವಿದ್ಯಾರ್ಥಿಗಳು...

ತುಮಕೂರು: ಪ್ರಧಾನಿ ಮಂತ್ರಿಯ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್ ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ.ಆರ್ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಈ ಇಬ್ಬರು ವಿದ್ಯಾರ್ಥಿಗಳು  ಪ್ರಧಾನಿ ಭೇಟಿ ಮಾಡುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ.

ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದಾರೆ. ಇಬ್ಬರಿಗೂ ಜಿಲ್ಲೆಯಿಂದ ಅವಕಾಶ ಸಿಕ್ಕಿರುವುದರಿಂದ ಕುಟುಂಬದವರಲ್ಲಿ ಸಂತಸ ಮನೆ ಮಾಡಿದೆ. ಜ.19 ರಂದು ಇಬ್ಬರು ವಿದ್ಯಾರ್ಥಿಗಳು ದೆಹಲಿಗೆ ಹಾರಲಿದ್ದು, ಜ.20 ರಂದು ನಡೆಯುವ ಪ್ರಧಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ವಿದ್ಯಾರ್ಥಿನಿ ದೀಪಿಕಾ ಗ್ರಾಮೀಣ ಶಾಲೆಗಳಲ್ಲಿ ಮೂಲ ಸೌಕರ್ಯ ಒದಗಿಸುವಂತೆ ಹಾಗು ‘ಬೇಟಿ ಪಡಾವೋ ಬೇಟಿ ಬಚಾವೋ’ ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮ ರೂಪಿಸುವಂತೆ ಪ್ರಧಾನಿಯವರಲ್ಲಿ ಮನವಿ ಮಾಡಿಕೊಳ್ಳಲು ತಯಾರಿಸಿ ನಡೆಸಿದ್ದಾರೆ.

ಇನ್ನು ಆಯ್ಕೆಯಾದ ಮತ್ತೊಬ್ಬ ವಿದ್ಯಾರ್ಥಿ ಸಾಗರ್ ಸಹ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಸಂತೋಷ ವ್ಯಕ್ತಪಡಿಸಿದ್ದು, ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ನೀಡದಂತೆ ನೋಡಿಕೊಳ್ಳುವುದು ಹೇಗೆ? ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿಗಳ ಬಗ್ಗೆ ತಿಳಿಸುತ್ತೇನೆ ಎಂದಿದ್ದಾರೆ.