ಟೆಲಿಕಾಂ ಕಂಪನಿಗಳಿಗೆ ಸುಪ್ರೀಂ ಚಾಟಿ : ಬಾಕಿ ಪಾವತಿಗೆ ಟೆಲಿಕಾಂ ಇಲಾಖೆ ಆದೇಶ : ಮೊಬೈಲ್ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ...

ನವದೆಹಲಿ : ಮೊಬೈಲ್ ಗ್ರಾಹಕರಿಗೆ ಟೆಲಿಕಾಂ ಕಂಪನಿಗಳು ಮತ್ತೆ ದರ ಹೆಚ್ಚಳದ ಶಾಕ್ ನೀಡುವ ಸಾಧ್ಯತೆ ದಟ್ಟವಾಗಿದೆ. ಕಳೆದ ಡಿಸೆಂಬರ್ ನಲ್ಲಿ ಜಿಯೋ , ಏರ್ಟೆಲ್ ಹಾಗೂ ಐಡಿಯಾ ಕಂಪನಿಗಳು ನಷ್ಟದ ಕಾರಣದಿಂದ ದರ ಹೆಚ್ಚಳ ಮಾಡಿದ್ದವು.

ಶುಕ್ರವಾರ ಸುಪ್ರೀಂ ಕೋರ್ಟ್, ಸರ್ಕಾರಕ್ಕೆ ಕಟ್ಟಬೇಕಾದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ಟೆಲಿಕಾಂ ಕಂಪನಿಗಳಿಗೆ ಬಾಕಿ ಪಾವತಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಬಾಕಿ ಪಾವತಿಸದಿದ್ದರೆ ಕಂಪನಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಹೇಳಿದೆ.

ಇನ್ನು ಸುಪ್ರೀಂ ಕೋರ್ಟ್ ಎಚ್ಚರಿಕೆಯ ಬೆನ್ನಲ್ಲೇ ಟೆಲಿಕಾಂ ಇಲಾಖೆ ಎಲ್ಲಾ ಕಂಪನಿಗಳಿಗೆ ಸುತ್ತೋಲೆ ಹೊರಡಿಸಿದ್ದು, ಶುಕ್ರವಾರ ಮಧ್ಯರಾತ್ರಿ 12 ರ ತುರ್ತು ಗಡುವನ್ನು ನೀಡಿದೆ. ಇದೇ ಸಮಯದಲ್ಲಿ ಬಾಕಿ ಪಾವತಿಸದ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ತನ್ನ ಹಿಂದಿನ ಆದೇಶವನ್ನು  ಟೆಲಿಕಾಂ ಇಲಾಖೆ ವಾಪಸ್ ಪಡೆದಿದೆ.

ಸುಪ್ರೀಂ ಕೋರ್ಟ್ ಎಚ್ಚರಿಕೆ ಹಾಗೂ ಟೆಲಿಕಾಂ ಇಲಾಖೆ ಆದೇಶದ ಹಿನ್ನಲೆ ಬಾಕಿ ಉಳಿಸಿಕೊಂಡಿರುವ 1.47 ಲಕ್ಷ ಕೋಟಿ ಮೊತ್ತವನ್ನು ಸರ್ಕಾರಕ್ಕೆ ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿರುವ ಮೊಬೈಲ್ ಸೇವಾ ಕಂಪನಿಗಳು , ಈ ಹೊರೆಯನ್ನು  ದರ ಹೆಚ್ಚಳದ ಮೂಲಕ ಗ್ರಾಹಕರಿಗೆ ವರ್ಗಾಯಿಸುವ ಸಾಧ್ಯತೆ ಇದೆ.