ಇಂದಿನಿಂದ ಅಂಡರ್ 19 ವಿಶ್ವಕಪ್ ಆರಂಭ
ಭವಿಷ್ಯದ ಕ್ರಿಕೆಟ್ ತಾರೆಯರ ಮಹಾಟೂರ್ನಿ ಎಂದೇ ಪರಿಗಣಿಸಲ್ಪಡುವ 19 ವಯೋಮಿತಿಯ ಏಕದಿನ ವಿಶ್ವಕಪ್ ಟೂರ್ನಿಯ 13ನೇ ಆವೃತ್ತಿಗೆ ಶುಕ್ರವಾರ ಚಾಲನೆ ಸಿಗಲಿದೆ. ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಎ ಗುಂಪಿನಲ್ಲಿರುವ ಹಾಲಿ ಚಾಂಪಿಯನ್ ಭಾರತ ತಂಡ ಭಾನುವಾರ ಶ್ರೀಲಂಕಾ ತಂಡವನ್ನು ಎದುರಿಸುವ ಮೂಲಕ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 9ರಂದು ಫೈನಲ್ ಪಂದ್ಯ ನಡೆಯಲಿದೆ. 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, 2 ಬಾರಿಯ ಚಾಂಪಿಯನ್ ಪಾಕಿಸ್ತಾನ, ಮಾಜಿ ಚಾಂಪಿಯನ್ಗಳಾದ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಫೇವರಿಟ್ ತಂಡಗಳ ಪಟ್ಟಿಯಲ್ಲಿವೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಅಚ್ಚರಿಯ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿವೆ. ಯುವ ಆಟಗಾರರಿಗೆ ರಾಷ್ಟ್ರೀಯ ತಂಡದ ಬಾಗಿಲು ತಟ್ಟಲು ಈ ಟೂರ್ನಿ ಪ್ರಮುಖ ವೇದಿಕೆಯಾಗಿದೆ.
ಭಾರತ ಹಾಟ್ ಫೇವರಿಟ್: ದಾಖಲೆಯ ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡ ಈ ಬಾರಿ ಪ್ರಿಯಂ ಗಾರ್ಗ್ ಸಾರಥ್ಯದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಹೋರಾಟ ನಡೆಸಲಿದೆ. ಈಗಾಗಲೆ ದಕ್ಷಿಣ ಆಫ್ರಿಕಾ ನೆಲದಲ್ಲಿ ವಿಶ್ವಕಪ್ ಪೂರ್ವಭಾವಿಯಾಗಿ ಆತಿಥೇಯರೆದುರು ಆಡಿದ ದ್ವಿಪಕ್ಷೀಯ ಸರಣಿ ಮತ್ತು ಚತುಷ್ಕೋನ ಸರಣಿಗಳಲ್ಲಿ ಗೆದ್ದ ವಿಶ್ವಾಸ ಭಾರತ ತಂಡಕ್ಕಿದೆ. ಕನ್ನಡಿಗರಾದ ಶುಭಾಂಗ್ ಹೆಗ್ಡೆ ಮತ್ತು ವಿದ್ಯಾಧರ್ ಪಾಟೀಲ್ ತಂಡದಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್, ರವಿ ಬಿಷ್ಣೋಯಿ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್, ಧ್ರುವಚಂದ್ ಜುರೆಲ್, ಅಥರ್ವ ಅಂಕೋಲ್ಕರ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.