ನಾಲ್ಕನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ...!

ಸಾರಿಗೆ ನಿಗಮಗಳ ನೌಕರರನ್ನೂ ʼಸರಕಾರಿ ನೌಕರರುʼ ಎಂದು ಪರಿಗಣಿಸಬೇಕು ಎಂಬ ಬೇಡಿಕೆಯ ಜೊತೆಗೆ  ಹಲವು ಬೇಡಿಕೆಗಳನ್ನು ಪೂರೈಸುವಂತೆ  ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದು ಮಹತ್ವದ ತಿರುವು ಪಡೆದುಕೊಳ್ಳಲಿದೆ.  ಸಾರಿಗೆ ನೌಕರರ  ಒಕ್ಕೂಟದ ನೇತೃತ್ವದಲ್ಲಿ ಗುರುವಾರ ಆರಂಭವಾದ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಗೆ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ ಕೂಡ ಬೆಂಬಲ ಸೂಚಿಸಿದ್ದರು.


ಸರಕಾರ ರೈತ ಮುಖಂಡರ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆಸಿ ಸಂದಾನಕ್ಕೆ ಪ್ರಯತ್ನಿಸಿದೆ. ಆದರೆ ಈ ಎಲ್ಲಾ ಸಂದಾನ ಸಭೆಗಳು ವಿಫಲವಾಗಿದ್ದು, ಸರಾಕಾರ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ  ಪ್ರತಿಭಟನೆ ಮುಂದುವರೆಸುವುದಾಗಿ ಬಸ್‌ ನೌಕರರ ಒಕ್ಕೂಟಗಳು ತಿಳಿಸಿವೆ.

ಡಿಸಿಎಂ ಲಕ್ಷಣ ಸವದಿ, ಕಂದಾಯ ಸಚಿವ ಆರ್.‌ ಅಶೋಕ್,‌ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹಾಗೂ ಬಿಎಂಟಿಸಿ ಅಧ್ಯಕ್ಷ ನಂದೀಶ ರೆಡ್ಡಿ ನೌಕರ ಸಂಘ ಮತ್ತು ಕಾರ್ಮಿಕ ಸಂಘಗಳ ಮುಖ್ಯಸ್ಥರ ಜೊತೆಗೆ ಹಲವಾರು ಬಾರಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಾರಿಗೆ ನೌಕರರ ಒಂಬತ್ತು  ಬೇಡಿಕೆಗಳನ್ನು ಈಡೇರಿಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಸಾರಿಗೆ ನಿಗಮಗಳ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆಗೆ ಸರಕಾರ ಒಪ್ಪಿಗೆ ಸೂಚಿಸಿಲ್ಲ.

ಭಾನುವಾರ ರಾತ್ರಿಯಿಂದಲೇ ಬಸ್‌ ಸಂಚಾರ ಆರಂಭಿಸಲಾಗುತ್ತದೆ ಎಂದು ಲಕ್ಷಣ ಸವದಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ಸಾರಿಗೆ ನೌಕರರ ಜೊತೆಗಿನ ಮಾತುಕತೆ ಸಕಾರಾತ್ಮಕವಾಗಿದೆ, ಮುಷ್ಕರವನ್ನು ಕೈ ಬಿಡುವ ವಿಚಾರವಾಗಿ ಫ್ರಿಡಂ ಪಾರ್ಕನಲ್ಲೇ ಹೋಗಿ ಘೋಷಿಸುವುದಾಗಿ ಕೆಎಸ್‌ ಆರ್‌ ಟಿ ಸಿ  ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಹೇಳಿದ್ದರು. ಅದರೆ ಈ ಘಟನೆಯ ನಂತರ ಕೋಡಿಹಳ್ಳಿ ಚಂದ್ರಶೇಖರ ಜೊತೆಗ ಮಾತುಕತೆ ನಡೆಸಿದ ನೌಕರ ಪ್ರತಿನಿಧಿಗಳು ಮತ್ತೆ ಮುಷ್ಕರವನ್ನು ಮುಂದುವರೆಸುವುದಾಗಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ  ಸಾರಿಗೆ ನೌಕರರು ಮುಷ್ಕರವನ್ನು ಕೈ ಬಿಡುವ ಹಂತದಲ್ಲಿತ್ತಾದರೂ ಕೊನೆಯ ಗಳಿಗೆಯಲ್ಲಿ ಪ್ರತಿಭಟನೆ ಹಿಂಪಡೆಯುವ ನಿರ್ಧಾರ ಕೈಬಿಟ್ಟಿದ್ದುಸಾರಿಗೆ ನೌಕರರ ಹಾಗೂ ರಾಜ್ಯಸರ್ಕಾರದ ಹಗ್ಗ ಜಗ್ಗಾಟ ಬೆಂಗಳೂರಿನ ಫ್ರೀಡಂ ಪಾರ್ಕ್‌ ನಲ್ಲಿ ಮುಂದುವರಿದಿದೆ.

ವರದಿ: ಮಂಜುನಾಥ್‌ ನಾಯಕ್