ರಾಜ್ಯದಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ದಶಕಗಳ ಕನಸಿಗೆ ಮರುಚಾಲನೆ...!
ರಾಜ್ಯದಲ್ಲಿ ಚಿತ್ರ ನಗರಿ (ಫಿಲ್ಮ್ ಸಿಟಿ) ನಿರ್ಮಿಸುವ ದಶಕಗಳ ಕನಸಿಗೆ ಮರುಚಾಲನೆ ದೊರೆತಿದೆ.
ಚಿತ್ರ ನಿರ್ಮಾಣ ಸೌಲಭ್ಯ, ಆ್ಯನಿಮೇಷನ್ ಕೇಂದ್ರವನ್ನೂ ಒಳಗೊಂಡುಬ ಪ್ರವಾಸಿ ಆಕರ್ಷಣೆಯಿರುವ ವಿಶ್ವ ದರ್ಜೆಯ ಫಿಲ್ಮ್ ಸಿಟಿಯನ್ನು ಬೆಂಗಳೂರು ನಗರದ ಹೊರವಲಯದಲ್ಲಿ ನಿರ್ಮಿಸಲು ಸರಕಾರ ನಿರ್ಧರಿಸಿದೆ.
ಮೊದಲಿಗೆ ಹೆಸರಘಟ್ಟ, ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಮೈಸೂರು, ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ರಾಮನಗರ ಹಾಗೂ ನಂತರ ಕನಕಪುರ ರಸ್ತೆಯ ರೋರಿಚ್ ಎಸ್ಟೇಟ್‌ನಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಘೋಷಣೆ ಮಾಡಲಾಗಿತ್ತು. ಇದೀಗ, ಬೆಂಗಳೂರು ನಗರದ ಹೊರವಲಯದ ಸೂಕ್ತ ಜಾಗದಲ್ಲಿ ಚಿತ್ರ ನಗರಿ ನಿರ್ಮಿಸುವ ತೀರ್ಮಾನಕ್ಕೆ ಸರಕಾರ ಬಂದಿದೆ.
ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಬುಧವಾರ ಡಿಸಿಎಂ ಡಾ.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಈ ಸಂಬಂಧ ಸಭೆ ನಡೆಯಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ''ಬೆಂಗಳೂರು ಹೊರವಲಯದಲ್ಲಿ ಫಿಲ್ಮ್ ಸಿಟಿಯನ್ನು ನಿರ್ಮಿಸುವುದು ನಿಶ್ಚಿತ. ಸಿಎಂ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಸ್ಥಳ ನಿಗದಿಪಡಿಸಲಾಗುವುದು'' ಎಂದು ತಿಳಿಸಿದರು.
''ಚಲನಚಿತ್ರರಂಗಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳು ಫಿಲ್ಮ್ ಸಿಟಿಯಲ್ಲಿ ಇರಲಿವೆ. ಡಿಸ್ನಿ ಲ್ಯಾಂಡ್ ಸೇರಿ ದೇಶ, ವಿದೇಶದ ಹಲವು ಫಿಲ್ಮ್ ಸಿಟಿಗಳನ್ನು ಅಧ್ಯಯನ ಮಾಡಿ ಉತ್ತಮ ಹಾಗೂ ವಿಭಿನ್ನವಾದ ಫಿಲ್ಮ್‌ಸಿಟಿ ಮಾಡಲು ನಿರ್ಧರಿಸಲಾಗಿದೆ. ಇದು ಪ್ರವಾಸೋದ್ಯಮ ಚಟುವಟಿಕೆಗಳಿಗೂ ಪೂರಕವಾಗಿರಬೇಕು. ಆ್ಯನಿಮೇಷನ್ ರಂಗದಲ್ಲಿ ಬೆಂಗಳೂರು ಹೆಸರು ಮಾಡಿದ್ದು, ಈ ವಲಯಕ್ಕೆ ಚಿತ್ರ ನಗರಿ ನಿರ್ಮಾಣದಿಂದ ಇನ್ನಷ್ಟು ಉತ್ತೇಜನ ಸಿಗಲಿದೆ. ಎಲ್ಲಿಮತ್ತು ಎಷ್ಟು ವಿಸ್ತೀರ್ಣದಲ್ಲಿ ಫಿಲ್ಮ್ ಸಿಟಿ ನಿರ್ಮಾಣವಾಗಲಿದೆ ಎಂಬ ಬಗ್ಗೆ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು'' ಎಂದು ಅಶ್ವತ್ಥನಾರಾಯಣ ಹೇಳಿದರು.