ಮೆಟ್ರೋ ಸ್ಮಾರ್ಟ್ ಕಾರ್ಡ್‌ನ ರಿಯಾಯಿತಿ ಕಡಿತ!

ಸಿಲಿಕಾನ್ ಸಿಟಿ ಜನತೆಗೆ ಮೆಟ್ರೋ ಒಂದು ವರವೇ ಸರಿ . ಇದಕ್ಕೆ ಕಾರಣ ನಮ್ಮ ಮೆಟ್ರೋ ಅಂತಾರಾಷ್ಟ್ರೀಯb ಗುಣಮಟ್ಟದ ಸೇವೆಯನ್ನು ಪ್ರಯಾಣಿಕರಿಗೆ ನೀಡುತ್ತಿದೆ.
ಬಹುತೇಕ ಜನ  ಬೆಂಗಳೂರಿನ ಟ್ರಾಫಿಕ್ ನಿಂದ ದೂರ ಉಳಿಯಲು ದೈನಂದಿನ ಪ್ರಯಾಣಕ್ಕಾಗಿ ಮೆಟ್ರೊ ಅವಲಂಬಿಸಿದ್ದಾರೆ.

ಮಹಾನಗರ ಸಾರಿಗೆಗೆ (ಬಿಎಂಟಿಸಿ) ಹೋಲಿಸಿದರೆ, ನಮ್ಮ ಮೆಟ್ರೋ ಪ್ರಯಾಣ ದರ ತುಸು ದುಬಾರಿ. ಈಗ ಮತ್ತೆ ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸುವವರ ಅನುಕೂಲಕ್ಕೆ ಜಾರಿಗೆ ತಂದಿರುವ ಮೆಟ್ರೋ ಸ್ಮಾರ್ಟ್ ಕಾರ್ಡ್‌ನ ಶೇಕಡಾ ರಿಯಾಯಿತಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಡಿತಗೊಳಿಸಿದೆ. ಇದು ಪ್ರಯಾಣಿಕರಿಗೆ ಬೇಸರ ತಂದಿದೆ .

ಟಿಕೆಟ್ ಕೌಂಟರ್‌ನಲ್ಲಿ ಜನಸಂದಣಿ ತಪ್ಪಿಸಲು ಮೆಟ್ರೋ ಕಾರ್ಡ್ ಜಾರಿಗೆ ಬಂತು. ಇದಕ್ಕೆ ಪ್ರಯಾಣಿಕ ಕನಿಷ್ಠ 50 ರುಪಾಯಿ ನಿಶ್ಚಿತ ಮೊತ್ತ ಪಾವತಿಸಿ, ಕಾರ್ಡ್ ಪಡೆಯಬೇಕು. ತನಗೆ ಎಷ್ಟು ಬೇಕೋ ಅಷ್ಟು ಮೊತ್ತವನ್ನು ರಿಚಾರ್ಜ್ ಮಾಡಿಸಿ, ಆ ಮೊತ್ತ ಮುಗಿಯುವವರೆಗೂ ಬಳಸಬಹುದು. 

ಆದರೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಬಂದ ಮೇಲೆ ಕಾರ್ಡ್ ಪಡೆದು ಪ್ರಯಾಣಿಸುವವರಿಗೆ ಹಾಗೂ ಟಿಕೆಟ್ (ಕಾಯಿನ್) ತೆಗೆದುಕೊಂಡು ಪ್ರಯಾಣಿಸುವವರ ನಡುವೆ ವ್ಯತ್ಯಾಸ ಆಯಿತು. ಕಾರ್ಡ್‌ದಾರರಿಗೆ ಶೇ 15 ರಷ್ಟು ರಿಯಾಯಿತಿ ದೊರೆಯುತ್ತಿತ್ತು. 
 ಆದರೆ ಕಳೆದ ಬುಧವಾರ ಬಿಎಂಆರ್‌ಸಿಎಲ್ ಈ ರಿಯಾಯಿತಿಯನ್ನು ಶೇ 5 ಕ್ಕೆ ಇಳಿಸಿ ಆದೇಶ ಹೊರಡಿಸಿದೆ. ಮೆಟ್ರೋ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ ಹಾಗೂ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ನೀಡಲು ಈ ಕ್ರಮ ಅವಶ್ಯಕವಾಗಿತ್ತು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಆದರೆ ಇದಕ್ಕೆ ಮೆಟ್ರೋ ಬಳಕೆದಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ,ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವರು ಬಿಎಂಆರ್‌ಸಿಎಲ್‌ಗೆ ಪ್ರಶ್ನೆ ಮಾಡಿದ್ದಾರೆ. ಈಗಾಗಲೇ ಕಾರ್ಡ್‌ಗೆ ನಿಶ್ಚಿತ ಠೇವಣಿಯಾಗಿ 50 ರುಪಾಯಿ ಪಡೆಯುವುದರಿಂದಲೇ ಮೆಟ್ರೋಕ್ಕೆ ಲಾಭವಾಗುತ್ತಿದೆ. ಶೇ 15 ರಷ್ಟು ರಿಯಾಯಿತಿಯನ್ನು 5 ಕ್ಕೆ ಕಡಿತಗೊಳಿಸಿರುವುದು ಸರಿಯಲ್ಲ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೊರೆ ಆಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.