ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ಮುಖಾಮುಖಿಯಾಗಿ ಹುತಾತ್ಮರಾದ 20 ಭಾರತೀಯ ಸೈನಿಕರು...
ಪೂರ್ವ ಲಡಾಕ್ ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ, ಚೀನಾದ ಸೇನೆಯು ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಕಾರಣ, ಉಭಯ ದೇಶಗಳ ಸೇನೆಯ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ, ಭಾರತದ '20 ಸೈನಿಕರು' ಹುತಾತ್ಮರಾಗಿದ್ದಾರೆ ಎಂದು ಮಂಗಳವಾರ ಭಾರತೀಯ ಸೇನೆ ಅಧಿಕೃತವಾಗಿ ತಿಳಿಸಿದೆ.
ಆರಂಭದಲ್ಲಿ ಭಾರತ ಚೀನಾ ಘರ್ಷಣೆಯಲ್ಲಿ ಒಬ್ಬ ಭಾರತೀಯ ಸೇನೆಯ ಕರ್ನಲ್ ಮತ್ತು ಇಬ್ಬರು ಭಾರತೀಯ ಸೇನೆಯ ಜವಾನರು ಹುತಾತ್ಮರಾದರು ಎಂದು ಭಾರತೀಯ ಸೇನೆ ತಿಳಿಸಿತ್ತು. ನಂತರ, ಮಂಗಳವಾರ ರಾತ್ರಿ ನೀಡಿದ ಹೇಳಿಕೆಯಲ್ಲಿ, ಭಾರತ ಚೀನಾ ಘರ್ಷಣೆಯಲ್ಲಿ, ಭಾರತೀಯ ಸೇನೆಯ 17 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದು, ಆ ಸೈನಿಕರು ಉಪ-ಶೂನ್ಯ ತಾಪಮಾನವಿದ್ದ, ಎತ್ತರದ ಪ್ರದೇಶದಲ್ಲಿ ಇದ್ದ ಕಾರಣ, ತಮಗಾದ ತೀವ್ರ ಗಾಯವನ್ನು ಸಹಿಸಲಾಗದೆ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿತು.
ಗಾಲ್ವಾನ್ ನ್ ಕಣಿವೆಯಲ್ಲಿ ನಡೆದ ಈ ಘರ್ಷಣೆಯ ಸಂದರ್ಭದಲ್ಲಿ ಬಹುತೇಕ ಅದೇ ಸಂಖ್ಯೆಯ ಚೀನಾದ ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಚೀನಾದ ಸೈನಿಕರಲ್ಲಿ 5 ಸೈನಿಕರು ಸಾವನ್ನಪ್ಪಿದ್ದು , 11 ಸೈನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಚೀನಾದ ಗ್ಲೋಬಲ್ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ್ತಿ ವಾಂಗ್ ವೆನ್ವೆನ್ ಟ್ವೀಟ್ ಮಾಡಿದ್ದಾರೆ. ಆದರೆ ಚೀನಾದ ಸೈನಿಕರು ಗಾಯಗೊಂಡ ಅಥವಾ ಹತರಾದ ಸಂಖ್ಯೆಯ ನಿಖರ ಮಾಹಿತಿ ಬಹಿರಂಗವಾಗಿಲ್ಲ.