ಗಲಾಟೆ ವೇಳೆ ಗುಂಡೇಟು!
ಬೆಂಗಳೂರು : ದುಬಾರಿ ಮೌಲ್ಯದ ಬೈಕ್ ಸಾಲದ ಇಎಂಐ ಪಾವತಿ ವಿಚಾರ ಸಂಬಂಧ ಉಂಟಾದ ಜಗಳದಲ್ಲಿ ರೊಚ್ಚಿಗೆದ್ದ ಖಾಸಗಿ ಕಂಪನಿ ಮಾಲಿಕರೊಬ್ಬರು, ಸಾಲ ವಸೂಲಾತಿ ಏಜೆಂಟನ ಸ್ನೇಹಿತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಹೆಣ್ಣೂರಿನಲ್ಲಿ ನಡೆದಿದೆ.
ಡಿ.ಜೆ.ಹಳ್ಳಿಯ ನಿವಾಸಿ ಸೈಯದ್ ಸಲೀಂ ಗುಂಡೇಟಿನಿಂದ ಗಾಯಗೊಂಡಿದ್ದು, ಆತ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾನೆ. ಈ ಗುಂಡಿನ ದಾಳಿ ನಡೆಸಿದ ಆರೋಪದ ಮೇರೆಗೆ ಉದ್ಯಮಿಗಳಾದ ಮಯೂರೇಶ್ ಹಾಗೂ ಅಮರೇಂದರ್ ಹಾಗೂ ಸಾಲ ವಸೂಲಿಗೆ ತೆರಳಿ ಗಲಾಟೆ ಮಾಡಿದ ಆರೋಪದ ಮೇರೆಗೆ ಸಲೀಂ ಸ್ನೇಹಿತರಾದ ಸೈಯದ್ ಅರ್ಫಾದ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.