ಜೆಎನ್‌ಯು ವಿದ್ಯಾರ್ಥಿ ಹೋರಾಟಕ್ಕೆ ದೀಪಿಕಾ ಬೆಂಬಲ..!

 

ಇತ್ತೀಚೆಗೆ ದೆಹಲಿಯ ಜೆಎನ್‌ಯುದಲ್ಲಿ ನಡೆದ ಹಿಂಸಾಚಾರ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ನಟಿ ದೀಪಿಕಾ ಪಡುಕೋಣೆ ಅಚ್ಚರಿ ಮೂಡಿಸಿರುವುದಲ್ಲದೆ ವಿದ್ಯಾರ್ಥಿ ಹೋರಾಟಗಾರರಿಗೆ ಬೆಂಬಲ ಸೂಚಿಸಿದ್ದಾರೆ.  ತಮ್ಮ ಬಹುನಿರೀಕ್ಷೆಯ ‘ಛಪಾಕ್‌’ ಚಿತ್ರದ ಪ್ರಮೋಷನ್‌ಗಾಗಿ ದೆಹಲಿಗೆ ಆಗಮಿಸಿದ್ದ ದೀಪಿಕಾ, ಸಂಜೆ ವೇಳೆಗೆ ಜೆಎನ್‌ಯುದ ಸಾಬರ್‌ಮತಿ ಹಾಸ್ಟೆಲ್‌ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಹಾಜರಾದರು. ವಿದ್ಯಾರ್ಥಿಗಳ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ ದೀಪಿಕಾ, ಪ್ರತಿಭಟನಾ ಸ್ಥಳದಲ್ಲಿ ಯಾವುದೇ ಮಾತುಗಳನ್ನು ಆಡಲಿಲ್ಲ. ಈ ಪ್ರತಿಭಟನೆ ನೇತೃತ್ವವನ್ನು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನೇತಾರ ಕನ್ಹಯಾ ಕುಮಾರ್‌ ವಹಿಸಿದ್ದರು.

ಇದಕ್ಕೂ ಮುನ್ನ ದೆಹಲಿಯಲ್ಲಿ ಚಲನಚಿತ್ರ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ದೀಪಿಕಾ, ‘ಸಮಾಜದ ಬದಲಾವಣೆಗೆಗಾಗಿ ಪ್ರತಿಯೊಬ್ಬರೂ ಧ್ವನಿಯೆತ್ತಬೇಕು’ ಎಂದು ಕರೆ ನೀಡಿದರು. ‘ನಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಮಗೆ ದಿಗಿಲಾಗದಿರುವುದನ್ನು ಕಂಡು ಹೆಮ್ಮೆಯಾಗುತ್ತಿದೆ. ನಾವು ದೇಶ ಮತ್ತು ದೇಶದ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೇವೆ ಎಂಬುದಾಗಿ ನಾನು ಭಾವಿಸುತ್ತೇನೆ. ನಮ್ಮ ಅಭಿಪ್ರಾಯ ಏನೇ ಇರಲಿ. ಅದನ್ನು ವ್ಯಕ್ತಪಡಿಸುತ್ತಿರುವುದನ್ನು ಕಂಡು ಖುಷಿಯಾಗುತ್ತಿದೆ. ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟಿಸುವ ಮೂಲಕ ತಮ್ಮ ಧ್ವನಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸಮಾಜ ಮತ್ತು ನಮ್ಮ ಜೀವನದಲ್ಲಿ ಬದಲಾವಣೆಗೆ ಮುಂದಾಗಿದ್ದೇವೆ ಎಂದಾದರೆ, ನಮ್ಮ ಅಭಿಪ್ರಾಯವನ್ನು ನಿರ್ಭೀತಿಯಿಂದ ವ್ಯಕ್ತಪಡಿಸುವುದು ಬಹಳ ಮುಖ್ಯ’ ಎಂದು ಖಾಸಗಿ ಮಾಧ್ಯಮವೊಂದಕ್ಕೆ ದೀಪಿಕಾ ಪಡುಕೋಣೆ ತಿಳಿಸಿದರು.