ಪೊಲೀಸ್ ಸ್ಟೇಷನ್ ಎದಿರು ನಮಾಜ್ ......
ದಾವಣಗೆರೆ, ಡಿಸೆಂಬರ್ 20: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನಾ ಮೆರವಣಿಗೆಗೆ ಪೊಲೀಸ್ ಅನುಮತಿ ಕೇಳಲು ಆಗಮಿಸಿದ್ದ ಮುಸ್ಲಿಮರು ಠಾಣೆಯ ಮುಂಭಾಗವೇ ನಮಾಜ್ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಅಜಾದ್ ನಗರ ಪೊಲೀಸ್ ಠಾಣೆಯ ಮುಂಭಾಗ ಮುಸ್ಲಿಂ ಮುಖಂಡರು, ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಅನುಮತಿಗಾಗಿ ಠಾಣೆಗೆ ಆಗಮಿಸಿದ್ದು, ಪೊಲೀಸರು ನಿರಾಕರಿಸಿದ್ದಾರೆ. ಇದರಿಂದ ಠಾಣೆಯ ಮುಂಭಾಗವೇ ಕೂತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. ಅಲ್ಲದೆ ಕೆಲ ಸಮಯದ ನಂತರ ನಮಾಜ್ ಮಾಡಿದರು. ನಮಾಜ್ ಮಾಡಲು ಪೊಲೀಸ್ ಅಧಿಕಾರಿಗಳು ಹಾಸಿಗೆಗಳ ವ್ಯವಸ್ಥೆ ಮಾಡಿದರು.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಮ್ಮ ಮನವಿಯನ್ನು ಸ್ವೀಕರಿಸಬೇಕು ಅಲ್ಲಿಯವರೆಗೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದು, ಕೆಲ ಕಾಲ ಠಾಣೆಯ ಮುಂಭಾಗ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ, ರಾಷ್ಟ್ರಪತಿಗಳಿಗೆ ತಲುಪಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ರಾಷ್ಟ್ರಗೀತೆ ಹಾಡುವುದರ ಮೂಲಕ ಮುಸ್ಲಿಂ ಮುಖಂಡರನ್ನು ಮನವೊಲಿಸುವಲ್ಲಿ ಯಶಸ್ವಿಯಾದರು.