ಸರ್ಕಾರ ಕೆಲಸ ದೇವರ ಕೆಲಸ ಅಲ್ಲ ಭ್ರಷ್ಟಾಚಾರದ ಕೆಲಸ, ಏನಿದು? ಸ್ಟೋರಿ

ಐಪಿಎಸ್ ಅಧಿಕಾರಿ ಡಿ ರೂಪ  ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು. ಕಳೆದ ಐದು ವರ್ಷಗಳಲ್ಲಿ  ಡಿ. ರೂಪ  ಅವರನ್ನು ಸರ್ಕಾರ 20 ಬಾರಿ ವರ್ಗಾಯಿಸಿತ್ತು. ಈಗ ನಿರ್ಭಯ ಕ್ಲೀನ್,ಸೇಫ್ ಸಿಟಿ ಯೋಜನೆಯ ಹಗರಣದ ವಿಷಯದ ಅಂಗವಾಗಿ ಸರ್ಕಾರ ಮತ್ತೊಮ್ಮೆ ನಿಷ್ಠಾವಂತ ಅಧಿಕಾರಿಯ ವರ್ಗಾವಣೆಗೆ ಮಾಡಿದೆ.ಇದನ್ನು ಖಂಡಿಸಿ ನೈಜ ಸಾಮಾಜಿಕ ಹೋರಾಟಗಾರರ ಸಂಘ, ಬೆಂಗಳೂರಿನ ಮಯೂರ ವೃತ್ತದ ಹತ್ತಿರ ಪ್ರತಿಭಟನೆಯನ್ನು ಮಾಡಿದೆ. 

ರಾಜ್ಯ ಹಾಗು ಕೇಂದ್ರ ಸರ್ಕಾರ ಸೇರಿಕೊಂಡು ನಿರ್ಭಯ ಸೇಫ್ ಸಿಟಿ ಯೋಜನೆಗೆ ಚಾಲನೆಯನ್ನು ನೀಡಿದ್ದು, ಮಹಿಳೆಯರಿಗೆ ರಕ್ಷಣೆ ಕೊಡುವುದು ಯೋಜನೆಯ ಮುಖ್ಯ ಉದ್ದೇಶವಾಗಿತ್ತು. ಆದರೆ ಇದರಲ್ಲಿ, ಸುಮಾರು 600 ಕೋಟಿಗಿಂತ ಅಧಿಕವಾದ ಅವ್ಯವಹಾರದ ಬ್ರಷ್ಟಾಚಾರ ನಡೆದಿತ್ತು. ಐಎಂಎ ಹಗರಣದಲ್ಲಿ, ಆರೋಪಿಯ ಪಟ್ಟವನ್ನು ಹೊತ್ತಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನ ಚೇರ್ ಮೆನ್ ಸ್ಥಾನಕ್ಕೆ ಸರ್ಕಾರ ನೇಮಕ ಮಾಡಿತ್ತು. ಈ ಪ್ರಕರಣದ ವಿರುದ್ಧ ಮೊದಲನೆ ಬಾರಿಗೆ ಸಿಂಹಿಣಿ ಡಿ.ರೂಪ ಧ್ವನಿಯನ್ನು ಎತ್ತಿದ್ದರು. ಧ್ವನಿ ಎತ್ತಿರುವ ಕಾರಣದಿಂದಾಗಿ ರಾಜ್ಯ ಸರ್ಕಾರ ಡಿ.ರೂಪ ಅವರನ್ನು ಕರಕುಶಲ ಇಲಾಖೆಗೆ  ವರ್ಗಾವಣೆ ಮಾಡಿದ್ದು, ಸರ್ಕಾರ ಭ್ರಷ್ಟರ ಸಾಮ್ರಾಜ್ಯದ ಜೊತೆಗೆ ಆಡಳಿತವನ್ನು ನಡೆಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಹೇಳಿದ್ದಾರೆ. 

ಸರ್ಕಾರ ಭ್ರಷ್ಟರ ಪರವಾಗಿ ನಿಂತಿದ್ದು, ಭ್ರಷ್ಟಾಚಾರವನ್ನು ಮಟ್ಟ ಹಾಕುವ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಂಬಲವನ್ನು ನೀಡುತ್ತಿಲ್ಲ. ನಿರ್ಭಯ ಸೇಫ್ ಸಿಟಿ ಗೋವಿಂದ ಗೋವಿಂದ, ಸರ್ಕಾರದ ಕೆಲಸ ದೇವರ ಕೆಲಸ, ಅಲ್ಲ ಅಲ್ಲ ಭ್ರಷ್ಟಾಚಾರದ ಕೆಲಸ ಎಂದು ಘೋಷಣೆಗಳನ್ನು ಕೂಗುವ ಮೂಲಕ ನೈಜ ಸಾಮಾಜಿಕ ಹೋರಾಟಗಾರರ ಸಂಘದ ಸದಸ್ಯರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ವರದಿ: ಶ್ರೀ ಹರ್ಷ