2020 ರಲ್ಲಿ ಕೋವಿಡ್ ಬಿಟ್ಟು ವೈರಲ್ ಆದ ವಿಷಯಗಳ ಕುರಿತು ನಿಮಗೆಷ್ಟು ಗೊತ್ತಿದೆ?
ಲೇಖನ : ಶ್ರೀಹರ್ಷ
2020 ರಲ್ಲಿ ವೈರಲ್ ಆಗಿದ್ದು ಕೋವಿಡ್ ಮಾತ್ರವಲ್ಲ, ಇದರ ಜೊತೆಗೆ ಸಾಕಷ್ಟು ವಿಷಯಗಳು ಟ್ರೆಂಡ್ ಆಗಿದ್ದವು. ಕೆಲವೊಂದು ಜನರ ಮನೋರಂಜನೆಗೆ ಕಾರಣವಾಗಿದ್ದರೆ, ಇನ್ನು ಸ್ವಲ್ಪ ಸುದ್ದಿಗಳು ಗಂಭೀರವಾಗಿದ್ದವು. ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಂಟೆಂಟ್ ಗಳ ಕಿರುನೋಟ ಇಲ್ಲಿದೆ.
೧. ಬಾ ಗುರು
ಬಟ್ಟೆ ಅಂಗಡಿಯವನು, ಜನರು ಬಟ್ಟೆಗಳನ್ನು ತೆಗೆದುಕೊಳ್ಳಬೇಕೆನ್ನುವ ಸಲುವಾಗಿ ಮತ್ತು ವ್ಯಾಪಾರ ಚೆನ್ನಾಗಿ ಆಗಬೇಕೆನ್ನುವ ನಿಟ್ಟಿನಲ್ಲಿ ಬಾ ಗುರು ಬಟ್ಟೆ ತೊಗೋ ಅಂತ ಟ್ಯಾಗ್ ಲೈನ್ ಹಾಕಿಕೊಂಡಿದ್ದ. ಟ್ಯಾಗ್ ಲೈನ್ ನೊಂದಿಗೆ ಅಂಗಡಿಯ ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿತ್ತು. ಒಂದು ಸುಂದರ ತರುಣಿಯ ಮೇಲೆ ಹತ್ತಾರು ಹುಡುಗರ ಕಣ್ಣು ಬಿದ್ದಂತೆ, ಎಲ್ಲರ ಕಣ್ಣು ಈ ಸಾಲಿನ ಮೇಲೆ ಬಿದ್ದಿತ್ತು. ನಂತರ ಬಾ ಗುರು ಎನ್ನುವ ಶಬ್ಧ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರ ನಾಲಿಗೆಯ ಮೇಲೆ ಜೇನಿನಂತೆ ಹರಿದಾಡುತ್ತಿತ್ತು. ಬಾ ಗುರು ಟೀ ಕುಡಿ, ಬಾ ಗುರು ಕಟಿಂಗ್ ಮಾಡ್ಸು ಹೀಗೆ ಎಲ್ಲದಕ್ಕೂ ಈ ಲೈನ್ ಸೇರಿಸಿ, ತಮ್ಮ ಅಂಗಡಿಗಳ ನಾಮಕರಣ ಮಾಡುತ್ತಿದ್ದರು. 2020 ರಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅತಿ ಹೆಚ್ಚು ವೈರಲ್ ಆದ ಹ್ಯಾಷ್ ಟ್ಯಾಗ್ ಬಾ ಗುರು.
೨. ಟಿಕ್ ಟಾಕ್
ಟಿಕ್ ಟಾಕ್ ಶೋಕಿ ಯಾರಿಗಿಲ್ಲ ಹೇಳಿ, ಸಣ್ಣ ವಯಸ್ಸಿನ ಹುಡುಗರಿಂದ ಹಿಡಿದು 30 ದಾಟಿದ ಮಹಿಳೆಯರ ವರೆಗೂ ಟಿಕ್ ಟಾಕ್ ನ ಹುಚ್ಚು ಇತ್ತು. ಯುವತಿಯರು ಮೇಕ್ ಅಪ್ ಮಾಡಿಕೊಳ್ಳುವದಕ್ಕಿಂತ ಹೆಚ್ಚು ಸಮಯ ಟಿಕ್ ಟಾಕ್ ನಲ್ಲಿ ಕಳೆಯುತ್ತಿದ್ದರು. ಈ ಆಪ್ ನ ಬ್ಯಾನ್ ಗೆ ಭಾರತ ಮತ್ತು ಚೀನಾದ ನಡುವೆ ನಡೆದ ಯುಧ್ಧ ಪ್ರಮುಖ ಕಾರಣವಾಗಿತ್ತು. ಸರ್ಕಾರ ಟಿಕ್ ಟಾಕ್ ಬ್ಯಾನ್ ಮಾಡಿದ್ದು, ಜಾತ್ರೆಯಲ್ಲಿ ಮಗು ಹಠ ಮಾಡಿ ತೆಗೆದುಕೊಂಡ ಆಟಿಗೆ ಸಾಮಾನು ಕಳೆದುಕೊಂಡಂತೆ ಆಗಿತ್ತು ಯುವಕ-ಯುವತಿಯರ ಮನಸ್ಥಿತಿ. ಟಿಕ್ ಟಾಕ್ ಬ್ಯಾನ್ ನಂತರವೂ ಬಹಳಷ್ಟು ಹುಡುಗೀರು ಟಿಕ್ ಟಾಕ್ ಬಳಕೆ ಮಾಡುತ್ತಿದ್ದರು.ಆದ್ದರಿಂದ ಹುಡುಗ ತನ್ನ ಕೈ ಕೊಟ್ಟ ಪ್ರೇಯಸಿಗೆ ಈ ರೀತಿಯ ಡೈಲಾಗ್ ಹೇಳ್ತಾನೆ. ನನ್ನ ಪ್ರೀಮಿಯಂತೂ ಆಗ್ಲಿಲ್ಲ, ಟಿಕ್ ಟಾಕ್ ಡಿಲೀಟ್ ಮಾಡಿ ಕನಿಷ್ಠ ಪಕ್ಷ ದೇಶ ಪ್ರೇಮಿಯಾದ್ರು ಆಗು.
೩ ಕೊತ್ತಮರಿ ಸೊಪ್ಪು
ಡಿಜೆ ಹಳ್ಳಿ, ಕೆಜಿ ಹಳ್ಳಿ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಮಾರನೆ ದಿನ ಆರೋಪಿಗಳ ಕುಟುಂಬಸ್ಥರು ಬಂದು ಇವರದೇನು ತಪ್ಪಿಲ್ಲ, ಇವರು ಅಮಾಯಕರು ಎಂದು ಪೊಲೀಸರಿಗೆ ಹೇಳ್ತಾರೆ. ಅಮಾಯಕರು ಯಾಕೆ ರಾತ್ರಿ 1 ಗಂಟೆಗೆ ಕೃತ್ಯ ನಡೆದ ಜಾಗದಲ್ಲಿ ಓಡಾಡುತ್ತಿರುತ್ತಾರೆ ಎಂದು ಪೊಲೀಸರು ಮರು ಪ್ರಶ್ನೆ ಹಾಕಿದಾಗ, ಇಲ್ಲ ಅವರು ಕೊತ್ತಮಿರಿ ಸೊಪ್ಪು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು ಅಂತ ಉತ್ತರಿಸುತ್ತಾರೆ. ಸಿಂಹದ ಬಾಯಿಗೆ ಜಿಂಕೆ ಮಾಂಸ ಸಿಕ್ಕ ಹಾಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮೇಮ್ಸ್ ಮಾಡುವವರಿಗೆ ಇದು ಆಹಾರವಾಗಿತ್ತು. ನಂತರದ ದಿನಗಳಲ್ಲಿ ಕೊತ್ತಮರಿ ಸೊಪ್ಪು ಎಲ್ಲರ ತುಟಿಗೆ ನೋವುತರುವಂತಹ,ನಗೆಪಾಟಲಿನ ವಿಷಯವಾಗಿತ್ತು.
೪ ಡ್ರಗ್ಸ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಚಟುವಟಿಕೆಗಳು ನಡೆಯುತ್ತಿರುವ ಸಂಗತಿಯನ್ನು ಇಂದ್ರಜಿತ್ ಲಂಕೇಶ್ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿದ್ದು, ಜನರಿಗೆ ಆಘಾತ ಉಂಟು ಮಾಡುವ ಸುದ್ದಿಯಾಗಿತ್ತು. ಪೊಲೀಸರು ವಿಚಾರಣೆ ನಡೆಸಿದ ಮೇಲೆ ಡ್ರಗ್ಸ್ ಜಾಲದ ಬಲೆಗೆ ಸಿಕ್ಕ ನಟಿ ಮಣಿಯರ ಹೆಸರು ಹೊರಗೆ ಬಿದ್ದಿತ್ತು. ಹೀಗೆ ಪತ್ತೆ ಮಾಡುತ್ತ ಹೋದ ಹಾಗೆ ಹನುಮಪ್ಪನ ಬಾಲ ತರ ಆರೋಪಿಗಳ ಪಟ್ಟಿ ಬೆಳೆಯುತ್ತ ಹೋಗಿತ್ತು. ಈ ಸುದ್ದಿ ಸಹ ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಭೂಗತವಾಗಿ ನಡೆಯುತ್ತಿದ್ದ ಡ್ರಗ್ಸ್ ದಂಧೆ 2020 ರಲ್ಲಿ ಬೆಳಕಿಗೆ ಬಂದಿದೆ.
೫. ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ನ ಪ್ರತಾಪ ಸಂಪೂರ್ಣವಾಗಿ ನೆಲಸಮವಾಗಿತ್ತು. ನಾನು ಬಡತನದಲ್ಲಿ ಬೆಳೆದು, ಕಷ್ಟ ಪಟ್ಟು ಓದಿ ಡ್ರೋನ್ ಕಂಡು ಹಿಡಿದ್ದಿದ್ದೀನಿ ಅಂತ ಭಾಷಣವನ್ನು ಬಹಳ ವರ್ಷಗಳ ಹಿಂದೆ ಬಿಗಿದಿದ್ದ. ಆದರೆ ಇವನು ಹೇಳಿದೆಲ್ಲ ಸುಳ್ಳು ಎಂಬ ವರದಿ ಬರುತ್ತಿದ್ದ ಹಾಗೆ ಜನರು ಆಶ್ಚರ್ಯಚಕಿತರಾಗಿದ್ದರು. ಭಾವನಾತ್ಮಕವಾಗಿ ಕಾಗಕ್ಕ ಗುಬ್ಬಕ್ಕ ಕಥೆಯನ್ನ ಜನರು ನಂಬುವಂತೆ ಮಾಡಿದ್ದ. ಪ್ರತಾಪ್ ಡ್ರೋನ್ ಹಾರಿಸಿಲ್ಲ ಕಾಗೆ ಹಾರಿಸಿದ್ದಾನೆ, ಮಕ್ಕಳು ಆಡುವ ಡ್ರೋನ್ ತಯಾರಿಸಿದ್ದಾನೆ ಎನ್ನುವ ಅನೇಕ ನೆಟ್ಟಿಗರ ಗೇಲಿ ಮಾತುಗಳಿಗೆ ತುತ್ತಾಗಿದ್ದ ಪ್ರತಾಪ್. ಯಾರಾದ್ರು ಸುಳ್ಳು ಹೇಳಿದ್ರೆ, ಮಗ ಡ್ರೋನ್ ಹಾರಿಸ್ಬೇಡ ಸುಮ್ನಿರೋ ಎಂದು ಹೇಳುವ ಮಟ್ಟಿಗೆ ಮನೆ ಮಾತಾಗಿದ್ದ ಪ್ರತಾಪು.