ಕಳೆದ ವರ್ಷದಲ್ಲಿ ಯಾವ ಯಾವ ಚಿತ್ರಗಳು ಹಿಟ್ ಆಗಿದ್ದವು? ಇಲ್ಲಿದೆ ಲಿಸ್ಟ್

2020 ವರ್ಷದ ಪ್ರಾರಂಭದ ದಿನಗಳಲ್ಲಿ ಅನೇಕ ಚಿತ್ರಗಳು ಬಿಡುಗಡೆ ಆಗಿದ್ದವು. ನಂತರ ಕೋವಿಡ್ ನಿಂದಾಗಿ ಯಾವುದೇ ಚಿತ್ರಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರಲಿಲ್ಲ. ಲಾಕ್ ಡೌನ್ ಮದ್ಯದ ಸಮಯದಲ್ಲಿ ಸ್ವಲ್ಪ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ ಆಗಿದ್ದು, ಜನರು ಸಹ ನೋಡಿ ಸಂತೋಷ ಪಟ್ಟಿದ್ದರು. ನಂತರದ ದಿನಗಳಲ್ಲಿ ಸಿನಿಮಾಗಳು ನೇರವಾಗಿ ಥೀಯೇಟರ್ ನಲ್ಲಿ ಪ್ರದರ್ಶನಗೊಂಡಿದ್ದವು. ಹೆಚ್ಚು ಗಮನ ಸೆಳೆದ, ಹಿಟ್ ಆದ ಚಿತ್ರಗಳ ಮೆಲುಕು ಹಾಕೋಣ.

೧. ಪಾಪ್ ಕಾರ್ನ್ ಮಂಕಿ ಟೈಗರ್

ಸುಕ್ಕ ಸೂರಿ ಹಾಗೂ ಡಾಲಿ ಧನಂಜಯ್ ನ ಡೆಡ್ಲಿ ಕಾಂಬಿನೇಷನ್ ನಲ್ಲಿ ಮೂಡಿ ಬಂದ ಚಿತ್ರ. ಡಾಲಿಯ ವಿಭಿನ್ನವಾದ ಲುಕ್, ಚಿತ್ರದ ಟ್ರೈಲರ್ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಿತ್ತು. ನಿರ್ದೇಶಕ ಸೂರಿಯ ಪ್ರಯೋಗಾತ್ಮಕವಾದ ಸಿನಿಮಾ ಇದಾಗಿದ್ದು, ಹಣದ ದಾಹ, ಹೆಣ್ಣಿನ ಮೋಹ, ಪ್ರೇಮ ವಿರಹ, ಕೆಳ ಮಟ್ಟದ ಭೂಗತ ಜಗತ್ತು ಮತ್ತು ಸಂಬಂಧಗಳಲ್ಲಿ ಬರುವ ಭಿನ್ನಾಭಿಪ್ರಾಯಗಳ ವಿಷಯಗಳನ್ನು ನೈಜವಾಗಿ ತೆರೆ ಮೇಲೆ ತರುವುದು ಸೂರಿ ಇಂದ ಮಾತ್ರ ಸಾಧ್ಯ. ಪಾಪ್ ಕಾರ್ನ್ ದೇವಿಯ ಪಾತ್ರವನ್ನು ಮಾಡುವುದು ಅಷ್ಟು ಸುಲಭದ ಮಾತಲ್ಲ, ನಿವೇದಿತಾ  ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೂರಿಯ ನಿರ್ದೇಶನದ  ಘಮ ಇದ್ದವರಿಗೆ ಮಾತ್ರ ಈ ಸಿನಿಮಾ ಅರ್ಥವಾಗುತ್ತೆ.

. ಶಿವಾಜಿ ಸೂರತ್ಕಲ್

ಬಹಳ ವರ್ಷಗಳ ನಂತರ ರಮೇಶ್ ಅರವಿಂದ್ ಈ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದು, ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್ ಸಿನಿವೃತ್ತಿಯ 101 ನೇ ಸಿನಿಮಾ. ಕ್ರೈಂ ಸಸ್ಪೆನ್ಸ್ ಚಿತ್ರದ ಕಥಾ ಹಂದರವಾಗಿದೆ. ರಣಗಿರಿಯಲ್ಲಿ ನಡೆದ ಸಾವಿನ ರಹಸ್ಯವನ್ನು ನಾಯಕ ನಟ ಹೇಗೆ ಭೇದಿಸುತ್ತಾನೆ ಎನ್ನುವುದೇ ಚಿತ್ರದ ಪ್ರಮುಖ ಅಂಶ. ಸಿನಿಮಾದ ಸ್ಕ್ರೀನ್ ಪ್ಲೇ, ಗ್ರಾಫಿಕ್ಸ್, ಹಿನ್ನಲೆ ಸಂಗೀತ ಪ್ರೇಕ್ಷಕರನ್ನು ಮಾಯಾ ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ. ನಿರ್ದೇಶಕ ಆಕಾಶ್ ಶ್ರೀವಾತ್ಸವ್ ಪ್ರೇಕ್ಷಕರಿಗೆ ಮನೋರಂಜನೆ ನೀಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಶಿವಾಜಿಯ ನಟನೆಗೆ ಜನರು ಫಿದಾ ಆಗಿದ್ದು, ಚಿತ್ರ ಸೂಪರ್ ಹಿಟ್ ಆಗಿತ್ತು.

೩. ಲವ್ ಮಾಕ್‌ಟೇಲ್

ಇದು ರೋಮ್ಯಾಂಟಿಕ್ ಪ್ರೇಮ ಕಥೆಯನ್ನು ಹೊಂದಿರುವ ಚಿತ್ರ. ಮೊದಲನೆ ಬಾರಿಗೆ ಡಾರ್ಲಿಂಗ್ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದು, ಮಿಲನಾ ನಾಗರಾಜ್ ಹಾಗೂ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದಾರೆ. ಕೃಷ್ಣ  ಹೆಗಲಿನ ಮೇಲೆ ಜವಾಬ್ದಾರಿಯ ಮೂಟೆ ಜಾಸ್ತಿ ಇತ್ತು. ಯಾಕೆಂದರೆ ನಿರ್ದೇಶನ, ನಿರ್ಮಾಣದ ಜೊತೆಗೆ ನಾಯಕ ನಟನ ಪಾತ್ರಕ್ಕೆ ಬಣ್ಣ ಹಚ್ಚುವುದು ಸವಾಲಿನ ಕೆಲಸ. ಪರಿಶ್ರಮ ತೆರೆ ಮೇಲೆ ಕಾಣುತ್ತೆ. ಆದ್ದರಿಂದ ಚಿತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದು, ಹಿಟ್ ಚಿತ್ರಗಳ ಸಾಲಿಗೆ ಸೇರಿಕೊಂಡಿದೆ. ನಿಧಿಮಾ ಪಾತ್ರ ಬಹಳ ಜನಪ್ರಿಯವಾಗಿದ್ದು, ಇದರ ಕ್ರೆಡಿಟ್ ಮಿಲನ ನಾಗರಾಜ್ ಗೆ ಸಲ್ಲುತ್ತೆ. ತಮ್ಮ ನೈಜವಾದ ಅಭಿನಯದ ಮೂಲಕ ಜನರ ಹೃದಯವನ್ನು ಕರಗಿಸಿಬಿಟ್ಟಿದ್ದರು.ಈ ಒಂದು ಸಿನಿಮಾದಿಂದ ಮಿಲನಾ ಹುಡುಗರ ಕ್ರಶ್ ಆಗಿದ್ದರು.

೪. ಫ್ರೆಂಚ್ ಬಿರ್ಯಾನಿ

ಲಾಕ್ ಡೌನ್ ಸಮಯದಲ್ಲಿ ಈ ಚಿತ್ರ ಓಟಿಟಿಯ ವೇದಿಕೆಯಾದ ಅಮೆಜಾನ್ ನಲ್ಲಿ ಬಿಡುಗಡೆಯಾಗಿತ್ತು. ನಾಗ್ ರಾಜ್ ಎಂದೇ ಗುರುತಿಸಿಕೊಂಡ ಡ್ಯಾನಿಶ್ ಶೇಟ್ ಈ ಸಿನಿಮಾದಲ್ಲಿ ಮುಖ್ಯವಾದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೊಸ ಕಾಮಿಡಿ ಕಲಾವಿದರು ಸಹ ಶೇಟ್ ಗೆ ಸಾಥ್ ನೀಡಿದ್ದಾರೆ. ಒಟ್ಟಾರೆ ಕಾಮಿಡಿ ರುಚಿಯಿಂದ ತಯಾರಾದ ಬಿರಿಯಾನಿಯನ್ನು ನಿರ್ದೇಶಕ  ಪನ್ನಾಗಾಭರಣ ಪ್ರೇಕ್ಷಕರಿಗೆ ಬಡಿಸಿದ್ದಾರೆ. ಒಂದು ಸಾರಿ ಈ ಬಿರಿಯಾನಿಯ ರುಚಿಯನ್ನು ಸವಿಯಬಹುದು.

. ಆಕ್ಟ್ 1978

ಲಾಕ್ ಡೌನ್ ನಂತರ ಮೊಟ್ಟ ಮೊದಲನೆ ಬಾರಿಗೆ ಚಿತ್ರಮಂದಿರಗಳಲ್ಲಿ  ಈ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರ ಪ್ರೇಮಿಗಳು ಸಂಭ್ರಮಾಚರಣೆಯನ್ನು ಮಾಡುವ ಮೂಲಕ ಆಕ್ಟ್ 1978 ಚಿತ್ರವನ್ನು ಸ್ವಾಗತಿಸಿದ್ದರು. ತುಂಬು ಗರ್ಭಿಣಿ ಮಹಿಳೆ ಸರ್ಕಾರದ ವ್ಯವಸ್ಥೆಯ ವಿರುದ್ಧ ಹೋರಾಡುವುದು ಚಿತ್ರ ಕಥೆಯ ತುಣುಕು. ಯಜ್ಞಾ ಶೆಟ್ಟಿ ಮತ್ತೊಮ್ಮೆ ಅಭಿನಯದ ಸಾಮ್ಯರ್ಥವನ್ನು ನಿರೂಪಿಸಿದ್ದಾರೆ.ನಿಜ ಜೀವನದಲ್ಲಿಜನ ಸಾಮಾನ್ಯರ ಮೇಲೆ ನಡೆಯುವ ಸರ್ಕಾರಿ ಅಧಿಕಾರಿಗಳ ದರ್ಪ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ ವಿಷಯಗಳನ್ನ ಸಿನಿಮಾದ ಮೂಲಕ  ಜನರ ಮನಸ್ಸನ್ನು ಮುಟ್ಟುವ ಹಾಗೆ ನಿರ್ದೇಶಕ ಮನ್ಸೂರಿ ಹೇಳಿದ್ದಾರೆ. ಹೆಚ್ಚಿನ ಸಂಖ್ಯೆಯ  ಪ್ರೇಕ್ಷಕರು ಈ ಸಿನಿಮಾಕ್ಕೆ ವ್ಯಾಪಕವಾದ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ. 2020 ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಆಕ್ಟ್ 1978 ಅಗ್ರ ಸ್ಥಾನ ಪಡೆದುಕೊಳ್ಳುತ್ತದೆ.

ಬರಹ: ಹೆಚ್. ಶ್ರೀ ಹರ್ಷ