ಪ್ರಯೋಗಾತ್ಮಕ ಲಸಿಕೆ ಪ್ರಕ್ರಿಯೆಯಲ್ಲಿ ಕಂಡ ಆರೋಗ್ಯ ಸಮಸ್ಯೆಗೂ ಕೊರೊನಾ ಲಸಿಕೆ ಪ್ರಯೋಗಕ್ಕೂ ಸಂಬಂಧವಿಲ್ಲ : ಯಾವುದೇ ಪರಿಸ್ಥಿತಿಯಲ್ಲೂ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ನಿಲ್ಲಿಸಲ್ಲ: ಕೇಂದ್ರ ಸರಕಾರ

ಕಳೆದ ಕೆಲವು ತಿಂಗಳುಗಳಿಂದ ಪುಣೆಯ ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಭಾರತದಾದ್ಯಂತ ʼಕೊವಿಶಿಲ್ಡʼ ಕೊರೊನ ಲಸಿಕೆ ಪ್ರಯೋಗಗಳನ್ನು ನಡೆಸುತ್ತಿದೆ. ಈ ಸಂಧರ್ಭದಲ್ಲಿ ಪ್ರಯೋಗಕ್ಕೊಳಪಟ್ಟ ವ್ಯಕ್ತಿಯೊಬ್ಬರಿಗೆ ಆರಂಭಿಕ ಹಂತದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದಿತ್ತು. ಆದರೆ ಇಂತಹ ವ್ಯತಿರಿಕ್ತ ಘಟನೆಗಳಿಂದ  ಕೊರನಾ ಲಸಿಕೆ ತಯಾರಿಕೆ ಪ್ರಕ್ರಿಯೆಯಲ್ಲಿ ಯಾವುದೇ  ತಡೆ ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.


ಸಿರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ(ಎಸ್.ಎಸ್.ಆಯ್) ನಡೆಸುತ್ತಿರುವ ಕೊರೊನ ಲಸಿಕೆ ಪ್ರಯೋಗಕ್ಕೆ ಒಳಪಟ್ಟಿದ್ದ ಚೆನ್ನೈ ಮೂಲದ ವ್ಯಕ್ತಿಯೊಬ್ಬರು ತನ್ನ ದೇಹದ ಮೇಲೆ ಕೊರೊನ ಲಸಿಕೆಯ ಅಡ್ಡ ಪರಿಣಾಮದಿಂದ ಆರೊಗ್ಯ ಸ್ಥಿತಿ ಹದಗೆಟ್ಟಿರುವುದಾಗಿ ಆರೋಪಿಸಿದ್ದರು. ಈ ನಿಟ್ಟಿನಲ್ಲಿ ಎಸ್.ಎಸ್.ಆಯ್ ಸಂಸ್ಥೆಯ ಮೊರೆ ಹೋಗಿದ್ದ ವ್ಯಕ್ತಿ ೫ ಕೋಟಿ ಪರಿಹಾರ ಕೇಳಿದ್ದರು. ವ್ಯಕ್ತಿಗೆ  ಕಂಡು ಬಂದ ಆರೋಗ್ಯ ಸಮಸ್ಯೆಗೂ ಕೊರೊನಾ ಲಸಿಕೆ ಪ್ರಯೋಗಕ್ಕೂ ಸಂಬಧವಿಲ್ಲ ಎಂದು ಎಸ್.ಎಸ್.ಆಯ್ ಸಂಸ್ಥೆಯೂ ಪ್ರತಿಕ್ರಿಯೆ ನೀಡಿದೆ.  ಅಲ್ಲದೇ ವ್ಯಕ್ತಿಯ ವಿರುದ್ಧ ೧೦೦ ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯ ಪ್ರಕರಣ ಹೊರಡಿಸುವುದಾಗಿ ಎಚ್ಚರಿಸಿದೆ.

ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ ಭೂಷಣ್ ಇದಕ್ಕೆ ಪ್ರತಿಕ್ರಿಯಿಸಿದ್ದು ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ  ನಾವು ಯಾವುದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುವುದಿಲ್ಲ. ಅಲ್ಲದೆ ವ್ಯಕ್ತಿಗೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ಸರಕಾರ ಮಾಡಬೇಕಾದ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ ಎಂದರು.

ಸಾಮಾನ್ಯವಾಗಿ ಲಸಿಕೆಗಳನ್ನು ಅಭಿವೃದ್ಧಿ ಪಡಿಸಲು 4 ವರ್ಷ ತೆಗೆದುಕೊಂಡರೂ ಕೂಡ ಅದನ್ನು ತಜ್ಞರು ಅಸಮಾನ್ಯ ಕೆಲಸ ಎಂದು  ಅಭಿಪ್ರಾಯ ಪಡುತ್ತಾರೆ, ಹಾಗಾಗಿ ಸರಕಾರ ಕೊರೊನಾ ಲಸಿಕೆ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಶಕ್ತಿ ಮೀರಿದ ಪ್ರಯತ್ನ ಮಾಡುತ್ತಿದ್ದು 12 ರಿಂದ 18 ತಿಂಗಳುಗಳ ಕಡಿಮೆ ಅವಧಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸುವ ಸಾಹಸಕ್ಕೆ ಕೈ ಹಾಕಿದೆ ಎಂದು ರಾಜೇಶ್ ತಿಳಿಸಿದರು.

ವರದಿ:‌ ಮಂಜುನಾಥ್‌ ನಾಯಕ್