ಚನ್ನಬಸವ ಪಟ್ಟದೇವರ 130 ನೇ ಜಯಂತಿ ಆಚರಣೆ
ಬೀದರ : ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ರಕ್ಷಿಸಿದ ಚನ್ನಬಸವ ಪಟ್ಟದೇವರ ಜಯಂತಿಯನ್ನು ಇಂದು ಆಚರಿಸಲಾಯ್ತು.
ಜಿಲ್ಲೆಯ ಭಾಲ್ಕಿ ಪಟ್ಟಣದ ಹಿರೇಮಠದಲ್ಲಿ 130ನೇ ಜಯಂತೋತ್ಸವ ಕಾರ್ಯಕ್ರಮವನ್ನು ಶಿವಮೊಗ್ಗದ ಬೆಕ್ಕಿನ ಕಲ್ಮಠ ಶ್ರೀಗಳಾದ ಜಗತ್ ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ವಸತಿ ಸಚಿವರಾದ ವಿ.ಸೋಮಣ್ಣ ಉದ್ಘಾಟಿಸಿದರು.
ಇನ್ನು ಈ ಭಾಗದಲ್ಲಿ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಡಾ. ಚನ್ನಬಸವ ಪಟ್ಟದೇವರು, ನಿಜಾಮನ ಕಾಲದಲ್ಲಿ 1936 ರಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಪ್ರಸಾರ ಮಾಡಿದವರು. ಹೊರಗಡೆ ಉರ್ದು ಬೋರ್ಡು ಹಾಕಿ, ಕನ್ನಡ ಕಲಿಸಿದವರು. ‘ಕನ್ನಡದ ಮಠ ‘ , ಕನ್ನಡದ ಪಟ್ಟದೇವರೆಂದೇ ಖ್ಯಾತನಾಮ ಪಡೆದವರು. ಈ ಮೂಲಕ ನಿಜಾಮನ ದಬ್ಬಾಳಿಕೆಯಿಂದ ಮರೆಯಾಗಬಹುದಾಗಿದ್ದ ಕನ್ನಡವನ್ನು ಉಳಿಸಿದ ಕೀರ್ತಿ ಚನ್ನಬಸವ ಪಟ್ಟದೇವರಿಗೆ ಸಲ್ಲುತ್ತದೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು ಹನ್ನೇರಡನೇ ಶತಮಾನದಲ್ಲಿ ಬಸವಣ್ಣನವರು ಪುರೋಹಿತ ಶಾಹಿಗಳ ಕಪಿಮುಷ್ಟಿಯಿಂದ ಶರಣ ಸಂಸ್ಕೃತಿಯನ್ನು ರಕ್ಷಣೆ ಮಾಡಿದ್ದರು. ಇಪ್ಪತ್ತನೆಯ ಶತಮಾನದಲ್ಲಿ ನಿಜಾಮರ ದಬ್ಬಾಳಿಕೆಗೆ ಸಿಲುಕಿದ್ದ ಶರಣ ಸಂಸ್ಕೃತಿ ಮತ್ತು ಕನ್ನಡ ನಾಡು ನುಡಿಯನ್ನು ಚನ್ನಬಸವ ಪಟ್ಟದೇವರು ರಕ್ಷಿಸಿದರು ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್, ಸಂಸದರಾದ ಭಗವಂತ ಖೂಬಾ ಉಪಸ್ಥಿತರಿದ್ದರು.