ಹಂಪಿಯ ಸುತ್ತಮುತ್ತ ಅಕ್ರಮವಾಗಿ ಡ್ರೋಣ್ ಹಾರಾಟ
ಸ್ವಲ್ಪ ದಿನಗಳ ಹಿಂದೆ, ಹಂಪಿಯ ಮಾತಂಗ ಬೆಟ್ಟದ ಸಮೀಪ ಸೂರ್ಯೋದಯದ ಸಮಯದಲ್ಲಿ ಪ್ರವಾಸಿಗರು ಡ್ರೋಣ್ ಕ್ಯಾಮರಾದದಿಂದ ಚಿತ್ರೀಕರಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದವು. ನಿಯಮಾವಳಿಗಳನ್ನು ಮೀರಿ ತೆಗೆದ ಈ ದೃಶ್ಯಗಳು ಬಹುತೇಕರ ಟೀಕೆಗಳಿಗೂ ಅನುವುಮಾಡಿಕೊಟ್ಟಿತ್ತು. ಈಗ ಇಂತಹದ್ದೇ ಇನ್ನೊಂದು ಘಟನೆ ಬೆಳಕಿಗೆ ಬಂದಿದ್ದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಜಗತ್ತಿನ ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಹಂಪಿ ವಿಶೇಷವಾದ ಸ್ಥಾನಮಾನ ಪಡೆದುಕೊಂಡಿದೆ. ವಿಜಯನಗರದ ಸೌಂದರ್ಯವನ್ನು ಸವಿಯಲು ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ. ಕಲ್ಲಿನಿಂದ ಕೆತ್ತಿದ ಹೆಚ್ಚಿನ ಸಂಖ್ಯೆಯ ಸ್ಮಾರಕಗಳು ಹಂಪಿಯಲ್ಲಿವೆ. ಕಿಡಿಗೇಡಿಗಳ ಕೃತ್ಯದಿಂದ ಸ್ಮಾರಕಗಳಿಗೆ ಹಾನಿ ಉಂಟಾಗುತ್ತಲ್ಲೇ ಇದೆ. ಸ್ಮಾರಕಗಳ ರಕ್ಷಣೆಗಾಗಿ ಸರ್ಕಾರ ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದ್ದರು ಸಹ, ಸಾರ್ವಜನಿಕರು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಈಗ ಪರವಾನಿಗೆ ಇಲ್ಲದೆ ದ್ರೋಣ್ ಗಳು ಹಂಪಿಯ ಸುತ್ತ-ಮುತ್ತ ಹಾರಾಡುತ್ತಿವೆ.
ನಿಯಮಗಳ ಅನುಸಾರ ಅಧಿಕಾರಿಗಳ ಅನುಮತಿವಿಲ್ಲದೆ ಡ್ರೋಣ್ ಹಾರಿಸುವಂತಿಲ್ಲ,ಆದರೂ ಸಹ ವಿಜಯನಗರದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇವೆ. ದ್ರೋಣ್ ಗಳ ಹಾವಳಿಯಿಂದ ಸ್ಮಾರಕಗಳಿಗೆ ತೊಂದರೆಯಾಗುತ್ತಿದೆ ಎಂದು ಹೇಳಲಾಗಿದೆ. ಭದ್ರತಾ ಸಿಬ್ಬಂದಿಗಳಿಗೂ ಇದು ತಲೆ ನೋವಿನ ಸಂಗತಿಯಾಗಿದೆ. ಆದ್ದರಿಂದ ಈಗ ಅಧಿಕಾರಿಗಳು ಡ್ರೋಣ್ ಹಾರಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಕೆಲಸವನ್ನು ಮಾಡಿದ ವ್ಯಕ್ತಿಗಳ ದೃಶ್ಯಗಳನ್ನು ಸಿಸಿ ಕ್ಯಾಮರಾಗಳಲ್ಲಿ ಸೆರೆ ಹಿಡಿಯಲಾಗಿದ್ದು, ಶೀಘ್ರದಲ್ಲೇ ಇದನ್ನು ಪೊಲೀಸರಿಗೆ ನೀಡುತ್ತೇವೆ ಎಂದು ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಹಂಪಿ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಚಲಿಸುತ್ತಿರುವ ವಿಷಯದ ಬಗ್ಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದರು. ನಾವು ಸಹ ಇದರ ಕುರಿತು ಪರಿಶೀಲನೆಯನ್ನು ಮಾಡಿದ್ದೇವೆ. ಮಾರಾಟಸ್ಥಳಗಳಲ್ಲಿ ತೂಕವಿಲ್ಲದ ಡ್ರೋಣ್ ಗಳು ಸಿಗುತ್ತಿವೆ, ಆದ್ದರಿಂದ ಭದ್ರತಾ ಸಿಬ್ಬಂದಿಗಳಿಗೆ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವರು ಡ್ರೋಣ್ ಗಳನ್ನು ರಿಮೋಟ್ ಮುಖಾಂತರ ಹಾರಾಡಿಸುತ್ತಿದ್ದು ಬೆಳಗ್ಗಿನ ಜಾವ,ಮುಸ್ಸಂಜೆಯ ಸಮಯದಲ್ಲಿ ಹೆಚ್ಚಾಗಿ ಬಳಸುತ್ತಿದ್ದರು ಎಂದು ಸ್ಥಳೀಯ ಉದ್ಯಮಿಯಾದ ಮಂಜುನಾಥ್ ಹೇಳಿದ್ದಾರೆ. ಇನ್ನೂ ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಸಹ ಆರೋಪಿಗಳ ವಿರುದ್ಧ ಯಾವದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಹಂಪಿಯಲ್ಲಿ ಡ್ರೋಣ್ ಬಳಕೆ ಮಾಡುವುದು ಕಾನೂನು ದೃಷ್ಠಿಯಿಂದ ಅಪರಾಧ. ಇದನ್ನು ಮೀರಿ ದ್ರೋಣ್ ಉಪಯೋಗಿಸಿದ್ದೆ ಆದರೆ ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದುಕೊಳ್ಳುತ್ತಾರೆ. ಅತಿ ಶೇಘ್ರದಲ್ಲೆ ನಾಮ ಫಲಕಗಳನ್ನು ಹಾಕುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದು ಎಎಸ್ ಉಪ ಅಧ್ಯಕ್ಷರು ಕಾಳಿಮುತ್ತು ಹೇಳಿದ್ದಾರೆ.
ವರದಿ: ಶ್ರೀ ಹರ್ಷ