ಜೇಬಿನಲ್ಲಿದ್ದ ಈ ಪುಟ್ಟ ವಸ್ತು ಸರಗಳ್ಳನ ಸುಳಿವು ಕೊಟ್ಟಿತ್ತು
ಮೈಸೂರು:- ಮೈಸೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಸರಗಳ್ಳನನ್ನು ಬಂಧಿಸಿ 9.32 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರಗಳನ್ನು ವಿದ್ಯಾರಣ್ಯಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರಿನ ಸತ್ಯನಗರ ನಿವಾಸಿ ಸೈಯದ್ ಉಮ್ಮರ್ (39) ಬಂಧಿತ ಆರೋಪಿ. ಈತನಿಂದ 233 ಗ್ರಾಂ ತೂಕದ 7 ಚಿನ್ನದ ಮಾಂಗಲ್ಯ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಇವೆಲ್ಲವೂ ಸಾಧ್ಯವಾಗಿದ್ದು ಜೇಬಿನಲ್ಲಿದ್ದ ಒಂದು ಸರದ ತುಂಡಿನಿಂದ. ವಿದ್ಯಾರಣ್ಯಪುರಂ ಪೊಲೀಸರು ಡಿ.17ರಂದು ಜೆಪಿ ನಗರದ ಲಿಂಕ್ ರಸ್ತೆ ಬಳಿ ಸರಗಳ್ಳತನ ತಡೆ ಸಂಬಂಧ ವಾಹನಗಳ ತಪಾಸಣೆ ನಡೆಸುತ್ತಿದ್ದರು.
ಈ ಸಂದರ್ಭ ನಂಜನಗೂಡು ರಸ್ತೆ ಕಡೆಯಿಂದ ಜೆ.ಪಿ.ನಗರದ ಲಿಂಕ್ ರಸ್ತೆಯ ಕಡೆಗೆ ದ್ವಿಚಕ್ರ ವಾಹನದಲ್ಲಿ ಸೈಯದ್ ಉಮ್ಮರ್ ಬರುತ್ತಿದ್ದ. ಈತನನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ ಜೇಬಿನಲ್ಲಿ ಚಿನ್ನದ ಸರದ ತುಂಡೊಂದು ಸಿಕ್ಕಿದೆ. ಸ್ಕೂಟರ್ ಪರಿಶೀಲಿಸಿದಾಗ ಡಿಕ್ಕಿಯಲ್ಲಿ ಸ್ಕೂಟರ್ ನಂಬರ್ ಪ್ಲೇಟ್, ನಂಬರ್ ಸ್ಟಿಕ್ಕರ್ ಗಳೂ ಸಿಕ್ಕಿವೆ.
ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸರಗಳ್ಳತನ ಬಯಲಾಯಿತು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5, ಕುವೆಂಪುನಗರ ಹಾಗೂ ಆಲನಹಳ್ಳಿಯಲ್ಲಿ ಠಾಣೆಯಲ್ಲಿ ತಲಾ 1 ಸರಗಳ್ಳತನ ಪ್ರಕರಣ ಪತ್ತೆಯಾಗಿದೆ.