ಜ.12ಕ್ಕೆ ಬಿ ಶಿಪ್ ವಾಕಥಾನ್ 3.0..

ಬೆಂಗಳೂರು: ಆರ್ಯ ವೈಶ್ಯ ಸಮುದಾಯದವರ ಆರೋಗ್ಯ ಮತ್ತು ಐಶ್ವರ್ಯಾ ಶ್ರೇಯೋಭಿವೃದ್ಧಿಗಾಗಿ ಆರ್ಯ ವೈಶ್ಯ ಬಿಸಿನೆಸ್ ನೆಟ್‌ವರ್ಕಿಂಗ್ ಗ್ರೂಪ್‌ನ ಭಾಗವಾದ ಬಿ ಶಿಪ್ ಸಂಸ್ಥೆಯು ಜನವರಿ 12ರಂದು ಬೆಂಗಳೂರಿನ ಜಯನಗರದ ನಾಲ್ಕನೇ ಬಡಾವಣೆಯ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ 5ಕಿಲೊಮೀಟರ್‌ನ ಬಿ ಶಿಪ್ ವಾಕಥಾನ್ ಆಯೋಜಿಸಿದೆ.

‘ಬಿ ಶಿಪ್‌ನ ಮೂರನೇ ವರ್ಷದ ವಾಕಥಾನ್ ಇದಾಗಿದ್ದು, ಈ ನಡಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. 2018ರಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ವಾಕಥಾನ್‌ನಲ್ಲಿ 1500 ಮಂದಿ ಹೆಸರು ನೋಂದಾಯಿಸಿಕೊಂಡು ಭಾಗವಹಿಸಿದ್ದರು. ಅಂತೆಯೇ 2019ರಲ್ಲೂ 3000 ಮಂದಿ ಭಾಗವಹಿಸಿದ್ದರು. ಈ ಬಾರಿ 4000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ವಾಕಥಾನ್ ಸಂಘಟಕರು ಹೇಳಿದರು.

 

‘ಬಿ ಶಿಪ್ ಎಂಬುದು ಒಂದು ಸಂಸ್ಥೆಯಲ್ಲ. ಅದೊಂದು ಸದಾ ವಿಸ್ತಾರಗೊಳ್ಳುವ ತುಂಬು ಕುಟುಂಬವಿದ್ದಂತೆ. ಈ ಕುಟುಂಬದ ಆರೋಗ್ಯವೇ ಬಿ ಶಿಪ್ ವಾಕಥಾನ್‌ನ ಮುಖ್ಯ ಉದ್ದೇಶ. ಹೀಗಾಗಿಯೇ ಈ ವಾಕಥಾನ್ ಆಯೋಜಿಸಲಾಗಿದೆ. ಸಮುದಾಯದವರು ಕಾರ್ಯಕ್ರಮಕ್ಕೂ ಒಂದು ದಿನ ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ವಾಕಥಾನ್ ಶುರುವಾಗುವ ಅರ್ಧಗಂಟೆ ಮೊದಲು ಸ್ಥಳದಲ್ಲಿ ಉಪಸ್ಥಿತರಿಬೇಕು’ ಎಂದು ಸಂಸ್ಥೆ ಮನವಿ ಮಾಡಿದೆ.

ರೊಬೊಟಿಕ್ ಕಂಪನಿಯಾದ ಸಿರೆನಾ ಟೆಕ್ನಾಲಜಿಸ್ ಅಭಿವೃದ್ಧಿ ಪಡಿಸಿರುವ ಶಿಕ್ಷಣಕ್ಕೆ ಸಂಬಂಧಿಸಿದ ಭಾರತದ ಮೊದಲ ಹ್ಯುಮಾನಾಯ್ಡ್ ರೊಬೋಟ್ ಆದ ‘ನಿನೊ’ ಸಹ ವಾಕಥಾನ್‌ನಲ್ಲಿ ಪಾಲ್ಗೊಳ್ಳಲಿದೆ. ವಾಕಥಾನ್‌ನಲ್ಲಿ ಪಾಲ್ಗೊಂಡವರಿಗೆ ಇದು ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತದೆ.

ನಡಿಗೆ ಏನಕ್ಕೆ?

ನಡಿಗೆಯಿಂದ ಆರೋಗ್ಯಕ್ಕೆ ಸಾಕಷ್ಟು ಅನುಕೂಲ ಆಗಲಿದೆ. ಶುರು ಮಾಡಲು ಅತ್ಯಂತ ಸುಲಭ. ನಡಿಗೆಯಿಂದಾಗಿ ಹೃದಯದ ಆರೋಗ್ಯ ವೃದ್ಧಿಯಾಗುತ್ತದೆ, ತೂಕ ತಗ್ಗಿಸಬಹುದು, ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು, ರಕ್ತದ ಸರಬರಾಜು ಸರಾಗವಾಗುತ್ತದೆ, ಮಧುಮೇಹ ಆವರಿಸಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ, ಮೂಳೆಗಳಿಗೆ ಶಕ್ತಿ ತುಂಬುತ್ತದೆ, ಸ್ನಾಯುಗಳು ದೃಢವಾಗುತ್ತವೆ, ಜೀರ್ಣಕ್ರಿಯೆ ಸುಲಭವಾಗುತ್ತದೆ ಮತ್ತು ವಯಸ್ಸು ಕ್ಷೀಣಿಸಿದಂತೆ ಕಾಣುತ್ತದೆ. ಹೀಗಾಗಿ, ವರ್ಷಕ್ಕೊಮ್ಮೆ ಇಂಥ ವಾಕಥಾನ್ ಆಯೋಜಿಸಿದರೆ ಸಮುದಾಯದವರು ಸಹಜವಾಗಿ ನಡಿಗೆ ಮತ್ತು ಓಟವನ್ನು ದಿನ ನಿತ್ಯದ ಅಭ್ಯಾಸವನ್ನಾಗಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಸಂಸ್ಥೆಯ ವಾದ.

ವಾಕಥಾನ್ ಬರೀ ನಡಿಗೆಗೆ ಸೀಮಿತವಾಗಿಲ್ಲ. ಇಲ್ಲಿ ಅತ್ಯುತ್ತಮ ವ್ಯವಹಾರ ಪ್ರಯೋಜನಗಳೂ ಆಗಲಿವೆ. ಈ ನಡಿಗೆಯೂ ವೇಳೆ ಯುವ ಉತ್ಸಾಹಿಗಳು, ಸ್ನೇಹಿತರು, ಮಾರ್ಗದರ್ಶಕರು, ಅಪರಿಚಿತರ ಸಂಪರ್ಕ ಸೇತುವೆಯಾಗಲಿದೆ. ಇದರಿಂದ ದೊಡ್ಡ ದೊಡ್ಡ ಸಂಪರ್ಕಜಾಲವನ್ನು ಹೊಂದಬಹುದಾಗಿದೆ. ನಡೆದಾಡುವುದು, ಮಾತಾಡುವುದು ಮತ್ತು ಜೊತೆ ಜೊತೆಗೆ ಕೆಲಸ ಮಾಡುವುದು; ಈ ಮೂರ ಸಂಗಮದ ಸ್ಥಳ ಇದೊಂದೇ.

ವಾಕಥಾನ್ ಧ್ಯೇಯ

‘ನಾಳೆಯ ಉತ್ತಮ ಭವಿಷ್ಯಕ್ಕಾಗಿ ಈ ವಾಕಥಾನ್ ಆಯೋಜಿಸಲಾಗಿದೆ. ‘ಗೋ ಗ್ರೀನ್ ಮತ್ತು ಸ್ಟೇ ಕ್ಲೀನ್’ ಎಂಬುದು ವಾಕಥಾನ್ 3.0ದ ಧ್ಯೇಯ. ಮರಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮ ತಡೆಗಟ್ಟಲು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕಿದೆ. ಜೊತೆಗೆ ಹೆಚ್ಚು ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸಬೇಕಿದೆ. ನಮ್ಮ ಸುತ್ತಲಿನ ವಾತಾವರಣವನ್ನು ಹಸಿರುಮಯವಾಗಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲೆಡೆ ಹಸಿರು ಕಂಗೊಳಿಸುವಂತೆ ಮಾಡಿ ಬೆಂಗಳೂರಿಗೆ ಇರುವ ಗಾರ್ಡನ್ ಸಿಟಿ ಅನ್ನೋ ಹೆಸರಿಗೆ ನಿಜವಾದ ಅರ್ಥವನ್ನು ಕಲ್ಪಿಸಬೇಕಿದೆ. ಅದಕ್ಕಾಗಿ ಕನಿಷ್ಠ ಪಕ್ಷ ಪ್ರತಿಯೊಬ್ಬರೂ 8 ಸಸಿಗಳನ್ನು ನೆಟ್ಟು ಹಾಗೂ ಎರಡು ಮರಗಳನ್ನು ತಮ್ಮ ಸ್ವಂತ ಮಕ್ಕಳಂತೆ ಪೋಷಿಸುವ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳಬೇಕಿದೆ.

ಸಸಿಗಳು ಹಾಗೂ ಮರಗಳು ಅತಿಶುದ್ಧ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ದೊಡ್ಡ ಎಲೆಗಳುಳ್ಳ ಮರವೊಂದು ವಾರ್ಷಿಕವಾಗಿ 260 ಪೌಂಡ್ಸ್ ಪ್ರಮಾಣದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಅದು ಇಬ್ಬರಿಗೆ ಸಾಕಾಗುತ್ತದೆ. ಅಂತೆಯೇ ಎರಡು ಮರಗಳು ಹಾಗೂ 8 ಸಸಿಗಳು ಉತ್ಪಾದಿಸುವ ಆಮ್ಲಜನಕವು ಒಂದು ಸಾಮಾನ್ಯ ಕುಟುಂಬಕ್ಕೆ ಸಾಕಾಗುತ್ತದೆ.

ನೋಂದಣಿಗೆ ವೆಬ್‌ಸೈಟ್ ವಿಳಾಸ: www.bship.in

ಸಂಪರ್ಕ: ಗಣೇಶ 9341488071

ರವೀಂದ್ರ 9900098881