'ಇದು ನನಗೆ ಬಂದ ಮೊದಲ ಪ್ರಶಸ್ತಿ': ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ರಾಘಣ್ಣ...
2018ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, 'ಇರುವುದೆಲ್ಲವ ಬಿಟ್ಟು' ಚಿತ್ರದ ನಟನೆಗಾಗಿ ಮೇಘನಾ ರಾಜ್ ಅತ್ಯುತ್ತಮ ನಟಿ ಮತ್ತು ಅಮ್ಮನ ಮನೆ ಚಿತ್ರಕ್ಕಾಗಿ ರಾಘಣ್ಣ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ದಶಕದ ಬಳಿಕ ಮತ್ತೆ ಬಣ್ಣ ಹಚ್ಚಿದ ರಾಘಣ್ಣಗೆ 2018ನೇ ಸಾಲಿನ ರಾಜ್ಯ ಪ್ರಶಸ್ತಿ ಬಂದಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದು ಹೀಗೆ..
"ನನಗೆ ತುಂಬ ಖುಷಿಯಾಗಿದೆ. ಇದು ನನಗೆ ಬಂದ ಮೊದಲ ಪ್ರಶಸ್ತಿ. ಇದುವರೆಗೂ ನನಗೆ ಯಾವುದೆ ಪ್ರಶಸ್ತಿಗಳು ಬಂದಿರಲಿಲ್ಲ. ಅಪ್ಪಾಜಿ, ಶಿವರಾಜ್ ಕುಮಾರ್, ಪುನೀತ್ ಮತ್ತು ಪೂರ್ಣಿಮ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ನಾನು ಒಬ್ಬ ಮಿಸ್ ಆಗಿದ್ದೆ. ಆದರೀಗ ಇಡೀ ಕುಟುಂಬಕ್ಕೆ ಪ್ರಶಸ್ತಿ ಬಂದಿದೆ. ಈ ಪ್ರಶಸ್ತಿಯನ್ನು ಅಮ್ಮನ ಮನೆ ನಿರ್ದೇಶಕ ನಿಖಿಲ್ ಮಂಜು ಅವರಿಗೆ ಅರ್ಪಿಸುತ್ತೇನೆ" ಎಂದು ರಾಘಣ್ಣ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ದಯಾಳ್ ಪದ್ಮನಾಭನ್ ನಿರ್ದೇಶನ 'ಆ ಕರಾಳ ರಾತ್ರಿ' ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ಇನ್ನುಳಿದಂತೆ ಜೀವಮಾನ ಸಾಧನೆಗಾಗಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ ಡಾ ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ ಎಸ್ ಬಸವರಾಜು ಅವರಿಗೆ ವಿಷ್ಣುವರ್ಧನ ಪ್ರಶಸ್ತಿ ಘೋಷಣೆಯಾಗಿದೆ.