ಕರೋನಾ ವೈರಸ್ ಆರ್ಭಟ : ಭಾರತದ ವಿಮಾನಕ್ಕೆ ಅನುಮತಿ ನೀಡದ ಚೀನಾ ಸರ್ಕಾರ.
ಚೀನಾದಲ್ಲಿ ಕರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದುವರೆಗೂ 2,300 ಕ್ಕೂ ಹೆಚ್ಚು ಜನ ಕರೊನಾ ವೈರಸ್ ಗೆ ಬಲಿಯಾಗಿದ್ದಾರೆ ಎಂದು ಚೀನಾ ಸರ್ಕಾರ ಹೇಳಿದೆ.ಆದರೆ ಚೀನಾ ನಿಜವಾದ ಅಂಕಿ ಸಂಖ್ಯೆಗಳನ್ನು ಮರೆಮಾಚುತಿದ್ದು, ಇನ್ನು ಹೆಚ್ಚಿನ ಜನರು ಈ ಮಾರಣಾಂತಿಕ ವೈರಸ್ ಗೆ ಬಲಿಯಾಗಿರುವ ಸಾಧ್ಯತೆ ಇದೆ.
ಇನ್ನು ಚೀನಾದ ವುಹಾನ್ ನಗರದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ವಾಯುಸೇನೆಯ C-17 ವಿಮಾನವನ್ನು ಕಳುಹಿಸಲು ಭಾರತ ಸರ್ಕಾರ ನಿರ್ಧರಿಸಿದೆ. ವಿಮಾನದಲ್ಲಿ ಕರೊನಾ ವೈರಸ್ ಸಂತ್ರಸ್ತರಿಗೋಸ್ಕರ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟು , ಅದೇ ವಿಮಾನಾದಲ್ಲಿ ವುಹಾನ್ ನಗರದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಯೋಚಿಸಿತ್ತು.
ಆದರೆ ಭಾರತದ ವಿಮಾನಕ್ಕೆ ಚೀನಾ ಸರ್ಕಾರ ಅನುಮತಿ ನೀಡಲು ವಿಳಂಬ ಮಾಡುತ್ತಿದೆ. ಜಪಾನ್, ಉಕ್ರೇನ್ ಹಾಗೂ ಫ್ರಾನ್ಸ್ ರಾಷ್ಟ್ರಗಳ ವಿಮಾನಗಳಿಗೆ ಅನುಮತಿ ನೀಡಿರುವ ಚೀನಾ ಸರ್ಕಾರ ಭಾರತಕ್ಕೆ ಮಾತ್ರ ಅನುಮತಿ ನೀಡಿಲ್ಲ.ಇನ್ನು ಚೀನಾ ಉದ್ದೇಶಪೂರ್ವಕವಾಗಿಯೇ ವಿಳಂಬ ಮಾಡುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ಕ್ಸಿ ಜಿನ್ ಪಿಂಗ್ ಗೆ ಪತ್ರ ಬರೆದಿದ್ದ ಪ್ರಧಾನಿ ಮೋದಿ , ಕರೊನಾ ವೈರಸ್ ಜೊತೆಗಿನ ಹೋರಾಟದಲ್ಲಿ ಚೀನಾಗೆ ಭಾರತ ಸಂಪೂರ್ಣ ಸಹಕಾರ ನೀಡಲಿದೆ. ಮತ್ತು ಈ ನಿಟ್ಟಿನಲ್ಲಿ ಅಗತ್ಯ ಸಹಾಯವನ್ನು ಸಹ ಒದಗಿಸಲಾಗುವುದು ಎಂದು ಹೇಳಿದ್ದರು.
ಪ್ರಧಾನಿ ಮೋದಿ ನೀಡಿದ ಭರವಸೆಯಂತೆ ಭಾರತ ಗ್ಲೌಸ್, ಸರ್ಜಿಕಲ್ ಮಾಸ್ಕ್ ಸೇರಿದಂತೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಚೀನಾಗೆ ವಾಯುಸೇನೆಯ ವಿಮಾನದಲ್ಲಿ ಕಳುಹಿಸಿಕೊಡುತ್ತಿದೆ. ಭಾರತದಲ್ಲೂ ಈ ವಸ್ತುಗಳಿಗೆ ಬೇಡಿಕೆ ಹೆಚ್ಚಿದ್ದು, ಅಗತ್ಯ ಪ್ರಮಾಣದಲ್ಲಿ ದೊರಕದೆ ಕೊರತೆ ಉಂಟಾಗುತ್ತಿದೆ.ಆದರೂ ಸಹ ಮಾನವೀಯ ದ್ರಷ್ಠಿಯಿಂದ ನಮ್ಮ ದೇಶದಲ್ಲಿ ಕೊರತೆ ಉಂಟಾಗಿದ್ದರೂ ಚೀನಾ ಗೆ ವೈದ್ಯಕೀಯ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗುತ್ತಿದೆ.