ಬೆರಳಂಚಿನ ವಂಚನೆಗಳು...!!!
- ಸುಳಿವೆ ಸಿಗದೆ ನಡೆಯುತ್ತಿವೆ ಸೈಬರ್ ಕ್ರೈಮ್ ಗಳು
- ನೀವು ಮೋಸ ಹೋಗಬಹುದು ಹುಷಾರ್
ಬೆಂಗಳೂರು: ನಿಮಗೆ ನಿಮ್ಮ ಬಾಲ್ಯ ನೆನಪಿರಬಹುದೇನೋ? ಅಪರಿಚಿತರು ಯಾರಾದರೂ ಚಾಕಲೇಟ್ ಅಥವಾ ಏನಾದರು ತಿಂಡಿಕೊಟ್ಟರೆ ತಗೋಬೇಡಿ, ಗುರುತು ಪರಿಚಯ ಇಲ್ಲದೇ ಇರೋರು ಏನೇ ಕೊಟ್ಟರು ಮುಟ್ಟಬೇಡಿ ಎಂದು ಹೇಳುತ್ತಿದ್ದರು. ಕಾರಣ, ಯಾರು ಏನು ಮಾಡುತ್ತಾರೋ? ಹೇಗೆ ವಂಚಿಸುತ್ತಾರೋ ಎಂಬ ಭಯ…!
ಆದರೆ,ಈಗ ನಾವಿರೋ ಜಾಗದಲ್ಲೇ ಇದ್ದರೂ ಎಲ್ಲೋ ಕೂತು ಅಪರಿಚಿತರು ವಂಚಿಸುತ್ತಾರೆ. ಈ ವಂಚನೆಗೆ ಸೈಬರ್ ಅಪರಾಧ ಎಂದು ಕರೆಯುತ್ತೇವೆ. ಹೌದು, ಈ ಬಗ್ಗೆ ಎಷ್ಟೇ ಜಾಗೃತರಾಗಿದ್ದರೂ ಸಾಲದು.
ಹೇಗೆಲ್ಲಾ ನಡೆಯುತ್ತೆ ದೋಖ? ಬನ್ನಿ, ನೋಡೋಣ.
1.ಡೆಬಿಟ್ ಅಂಡ್ ಕ್ರೆಡಿಟ್ ಕಾರ್ಡ್ ವಂಚನೆ
ಕ್ಯಾಶ್ ಲೆಸ್ ವಹಿವಾಟುಗಳನ್ನು ಹೆಚ್ಚಿಸಲು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬಂದ ಹೊಸ ವಿಧಾನವೇ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆ. ಇದರಿಂದ ಹಲವಾರು ರೀತಿಯ ಪ್ರಯೋಜನಗಳು ಕಂಡು ಬರುತ್ತಿರು ಆನ್ ಲೈನ್ ವಂಚಕರು ನಾನಾ ರೀತಿಯಲ್ಲಿ ಸಂಚು ಹಾಕಿ ಕ್ರೆಡಿಟ್, ಡೆಬಿಟ್ ಕಾರ್ಡ್ ನಿಂದ ಹಣ ವಂಚನೆ ಮಾಡುತ್ತಿರುವುದು ಹೆಚ್ಚಾಗಿದೆ.
2.ಬ್ಲಾಕ್ ಮೇಲ್ ತಂತ್ರ..!
ಮೊದ ಮೊದಲು ಪ್ರೀತಿಯ ನಾಟಕವಾಡಿ, ವಿಶ್ವಾಸ ಗಳಿಸಿ ಯುವತಿಯರಿಂದ ಖಾಸಗಿ ಭಾವಚಿತ್ರಗಳನ್ನು ಹಾಕಿಸಿಕೊಂಡು ಅವುಗಳಿಂದಲೇ ಬ್ಲಾಕ್ ಮೇಲ್ ಮಾಡುತ್ತಿರುವ ಪ್ರಕರಣಗಳು ಸರ್ವೇಸಾಮಾನ್ಯ.
3.ಲಕ್ಕಿ ನಂಬರ್ ಆಮಿಷ
ನಿಮ್ಮ ಮೊಬೈಲ್ ಸಂಖ್ಯೆ ಲಕ್ಕಿ ನಂಬರ್ ನಲ್ಲಿ ಆಯ್ಕೆಯಾಗಿದೆ. ನೀವು ನವ ವಿವಾಹಿತರೆ ಅಥವಾ ಅವಿವಾಹಿತರೆ ಹೀಗೆಲ್ಲಾ ಹೇಳಿ ನಿಮಗೆ ಕಾರ್ ಅಥವಾ ಇನ್ನೇನೋ ಬಂದಿದೆ ಕೇವಲ ಡೆಲಿವರಿ ಚಾರ್ಜ್ ಅಷ್ಟೇ ನೀಡಿ ಕಾರು ಅಥವಾ ಗೋಲ್ಡ್ ಪಡೆಯಬಹುದು ಎಂದೆಲ್ಲಾ ಹೇಳಿ ಹಣ ಪಡೆದು ಪರಾರಿಯಾಗುತ್ತಾರೆ.
4.ಉದ್ಯೋಗದ ಆಮಿಷ
ಉದ್ಯೋಗ ಹುಡುಕುತ್ತಿರುವವರನ್ನೇ ಕೆಲ ವಂಚಕರು ಗುರಿಯಾಗಿಸಿಕೊಂಡು ಹೆಚ್ಚು ಸಂಬಳದ ಆಸೆ ಹುಟ್ಟಿಸಿ ಕನ್ಸಲ್ಟನ್ಸಿ ಸರ್ವಿಸಸ್ ಫೀ ಅಂತ ಪಡೆದು ಕಣ್ಮರೆಯಾಗುತ್ತಿರುವ ಪ್ರಕರಣಗಳು ಸರ್ವೇ ಸಾಮಾನ್ಯವಾಗುತ್ತಿವೆ.
5.ಲವ್ ಪ್ರಪೋಸಲ್
ಮ್ಯಾಟ್ರಿಮೋನಿಗಳಲ್ಲಿ ಅತ್ಯಾಕರ್ಷಕ ಪೋಟೋ ಗಳನ್ನು ಅಪ್ ಲೋಡ್ ಮಾಡಿ, ಮದುವೆಯಾಗುವುದಾಗಿ ನಂಬಿಸಿ ಅಕೌಂಟ್ ಗೆ ಹಣ ಹಾಕಿಸಿಕೊಂಡು ಇದ್ದಕ್ಕಿದ್ದಂತೆ ಮಾಯವಾಗುವ ಖದೀಮರು ಇದ್ದಾರೆ.
ಸೈಬರ್ ಕ್ರೈಮ್ ಗೆ ಸಂಬಂಧಿಸಿದ ಪ್ರಕರಣಗಳನ್ನು ನೀವು ದಿನ ನಿತ್ಯ ಕೇಳುತ್ತಿರುತ್ತೀರಿ, ನೋಡುತ್ತಿರುತ್ತೀರಿ. ಗೊತ್ತಿದ್ದು ಗೊತ್ತಿದ್ದು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತೆ. ನೀವು ಎಚ್ಚರವಾಗಿರಿ..ಇಂತಹ ಅನುಮಾನಾಸ್ಪದ ಸಂದೇಶಗಳು, ಕಾಲ್ ಗಳು ಬಂದಲ್ಲಿ ಕೂಡಲೇ ಸೈಬರ್ ಕ್ರೈಮ್ ಪೊಲೀಸರಿಗೆ ತಿಳಿಸಿ. ಹಾಗೇ ನಿಮಗೆ ಇಂತಹ ಅನುಭವ ಆಗಿದ್ದಲ್ಲಿ ನಮ್ಮೊಡನೆ ಹಂಚಿಕೊಳ್ಳಿ. ಸೈಬರ್ ಕ್ರೈಮ್ ಗಳ ಬಗ್ಗೆ ಜಾಗೃತಿ ಮೂಡಿಸೋಣ.