ಡಿಸೆಂಬರ್ 22ರಂದು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನಾಗಿ ಏಕೆ ಆಚರಿಸಲಾಗುತ್ತದೆ ಗೊತ್ತಾ?

 ಶ್ರೀನಿವಾಸ ರಾಮಾನುಜನ್‌ ಅವರ ಜನ್ಮ ವಾರ್ಷಿಕೋತ್ಸವವನ್ನು ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ. ತಮಿಳುನಾಡಿನ ಈರೋಡ್‌ನಲ್ಲಿ ಡಿಸೆಂಬರ್ 22,1887ರಲ್ಲಿ ಜನಿಸಿರುವ ರಾಮಾನುಜನ್‌ಗೆ ಗಣಿತ ವಿಷಯದೊಂದಿಗೆ ಇದ್ದ ಒಲವು, ಅಪಾರ ಜ್ಞಾನದಿಂದಾಗಿ ಪ್ರತಿ ವರ್ಷ ಡಿ. 22ರಂದು ಭಾರತದಲ್ಲಿ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.
 

ಬಾಲ್ಯದಿಂದಲೂ ರಾಮಾನುಜನ್‌ಗೆ ಗಣಿತ ವಿಷಯದ ಬಗ್ಗೆ ಅಪಾರ ಉತ್ಸಾಹ ಇತ್ತು. ಅದು ಎಷ್ಟರಮಟ್ಟಿಗೆ ಎಂದರೆ, 12 ನೇ ವಯಸ್ಸಿನಲ್ಲೇ ಟ್ರಿಗನಾಮೆಟ್ರಿ ( ತ್ರಿಕೋನಮಿತಿ)ಯಲ್ಲಿ ಅವರು ನಿಪುಣನಾಗಿದ್ದು, ಯಾರ ಸಹಾಯವೂ ಇಲ್ಲದೆ ಅನೇಕ ಸಿದ್ಧಾಂತಗಳನ್ನು ಅಭಿವೃದ್ಧಿಪಡಿಸಿದ್ದರು. ನಂತರ, ಅವರಿಗೆ ಕುಂಬಕೋಣಮ್‌ನ ಸರಕಾರಿ ಕಲಾ ಕಾಲೇಜಿನಲ್ಲಿ ಓದಲು ಸ್ಕಾಲರ್‌ಶಿಪ್‌ ಪಡೆದುಕೊಳ್ಳಲು ಯಶಸ್ವಿಯಾದರೂ ಸಹ, ಇತರೆ ವಿಷಯಗಳಲ್ಲಿ ಕಳಪೆ ಪ್ರದರ್ಶನದಿಂದಾಗಿ ಅದನ್ನೂ ಕಳೆದುಕೊಳ್ಳುತ್ತಾರೆ. ಹೀಗಾಗಿ, ಮನೆ ತೊರೆದ ರಾಮಾನುಜನ್‌, ಮದ್ರಾಸ್‌ನ ಪಚಯಪ್ಪ ಕಾಲೇಜಿಗೆ ಸೇರಿಕೊಳ್ಳುತ್ತಾರೆ.

ಬಳಿಕ, ಗಣಿತಶಾಸ್ತ್ರಜ್ಞ ರಾಮಸ್ವಾಮಿ ಅಯ್ಯರ್‌ ಬೆಂಬಲದೊಂದಿಗೆ ಅವರು ಮದ್ರಾಸ್‌ ಬಂದರು ಟ್ರಸ್ಟ್‌ನಲ್ಲಿ ಕ್ಲರ್ಕ್‌ ಆಗಿ ಕೆಲಸ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, 1913ರಲ್ಲಿ ಬ್ರಿಟೀಷ್ ಗಣಿತಶಾಸ್ತ್ರಜ್ಞ ಜಿ.ಎಚ್‌. ಹಾರ್ಡಿಗೆ ಶ್ರೀನಿವಾಸ ರಾಮಾನುಜನ್‌ ಪತ್ರ ಬರೆಯುತ್ತಾರೆ. ಇದಾದ ಬಳಿಕ ಅವರ ಜೀವನದಲ್ಲಿ ಮಹತ್ವದ ತಿರುವು ದೊರೆಯುತ್ತದೆ. ಗಣಿತ ವಿಷಯದಲ್ಲಿ ರಾಮಾನುಜನ್‌ಗೆ ಇರುವ ಪ್ರತಿಭೆಯನ್ನು ಅರಿತ ಹಾರ್ಡಿ, ಅವರನ್ನು ಲಂಡನ್‌ಗೆ ಆಹ್ವಾನ ನೀಡುತ್ತಾರೆ. ನಂತರ, ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಸೇರಿಕೊಂಡ ರಾಮಾನುಜನ್‌ರ ಯಶಸ್ಸಿನ ದಿನಗಳು ಅಲ್ಲಿಂದಲೇ ಆರಂಭವಾಗುತ್ತದೆ.

1917ರಲ್ಲಿ ಲಂಡನ್ ಗಣಿತ ಸಮಾಜದ ಸದಸ್ಯರಾಗಿಯೂ ಶ್ರೀನಿವಾಸ ರಾಮಾನುಜನ್‌ ನೇಮಕವಾಗುತ್ತಾರೆ. ಜತೆಗೆ, 1918ರಲ್ಲಿ ರಾಯಲ್‌ ಸೊಸೈಟಿಯ ಫೆಲೋ ಗೌರವವನ್ನೂ ಅವರು ಪಡೆದುಕೊಳ್ಳುತ್ತಾರೆ. ಜತೆಗೆ, ಈ ಗೌರವ ಪಡೆದುಕೊಂಡ ಅತಿ ಕಿರಿಯ ವ್ಯಕ್ತಿ ಎಂಬ ಹಿರಿಮೆಗೂ ಗಣಿತಶಾಸ್ತ್ರಜ್ಞ ರಾಮಾನುಜನ್‌ ಪಾತ್ರರಾಗುತ್ತಾರೆ.
   

ಆದರೆ, ಲಂಡನ್‌ನ ಹವಾಮಾನ ಮತ್ತು ಕಳಪೆ ಆಹಾರ ಪದ್ಧತಿ ರಾಮಾನುಜನ್‌ ಆರೋಗ್ಯದ ಮೇಲೆ ಪರಿಣಾಮ ಬೀರಿರುತ್ತದೆ. ಹೀಗಾಗಿ, ಕೇವಲ 32 ವಯಸ್ಸಿಗೇ ಕುಂಬಕೋಣಂನಲ್ಲಿ ಶ್ರೀನಿವಾಸ ರಾಮಾನುಜನ್‌ ಮರಣ ಹೊಂದುತ್ತಾರೆ.