ನಾನು ಮಾಡಿದ ಮೊದಲ ಸಂದರ್ಶನ..
ನಾನು ಅಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ ಪ್ರವೀಣ್ ಮೈನಾಳೆ. ಓದಿದ್ದು ಇಂಜಿನಿಯರಿಂಗ್ ಆದರೆ ಆಸಕ್ತಿ ಇದ್ದದ್ದು ಮಾತ್ರ ಪತ್ರಿಕೋದ್ಯಮದಲ್ಲಿ. ಮಾಧ್ಯಮ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಇತ್ತು. ಆದರೆ ಗುರಿಯನ್ನು ತಲುಪುವ ದಾರಿ ಗೊತ್ತಿರಲಿಲ್ಲ. ಆಗ ಕಂಡಿದ್ದೆ ಆಲ್ಮಾ ಮೀಡಿಯಾ ಸ್ಕೂಲ್.
ಗೌರೀಶ್ ಅಕ್ಕಿ ಅವರ ಸಾರಥ್ಯದ ಕಾಲೇಜ್ ಎಂದು ತಿಳಿದ ಕೂಡಲೇ ಮರು ಯೋಚನೆ ಮಾಡದೆ ಕಾಲೇಜು ಸೇರಿಕೊಂಡೆ.ಟಿಪಿಕಲ್ ಕಾಲೇಜ್ ಗಿಂತ ಭಿನ್ನವಾದ ಮತ್ತು ಪ್ರಾಯೋಗಿಕವಾದ ಸಿಲೆಬಸ್ ಅನ್ನು ಅಳವಡಿಸಿಕೊಂಡಿರುವುದು ನನ್ನನ್ನು ಆಕರ್ಷಿಸಿತು.
ವಿದ್ಯಾರ್ಥಿಗಳಿಗೆ ಸಮಾಜದ ಎಲ್ಲಾ ಆಯಾಮಗಳನ್ನು ಪರಿಚಯಿಸುವ ದೃಷ್ಟಿಯಿಂದ "ಸಾಧಕರ ಜೊತೆ ಸಂಭಾಷಣೆ" ಕಾರ್ಯಕ್ರಮದಡಿಯಲ್ಲಿ ವಿವಿಧ ಕ್ಷೇತ್ರದ ಸಾಧಕರ ಜೊತೆ ಮಾತನಾಡುವ ಅವಕಾಶವನ್ನು ನಮಗೆ ಒದಗಿಸಲಾಗುತ್ತದೆ.
ಅದೇ ರೀತಿ ಸಾಧಕರೊಬ್ಬರ ಜೊತೆ ನಾನು ನಡೆಸಿದ ಸಂಭಾಷಣೆಯ ಅನುಭವ ನಿಮ್ಮೊಂದಿಗೆ ಈ ಲೇಖನದಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಸೌಮ್ಯ ಸ್ವಭಾವದ ವ್ಯಕ್ತಿತ್ವ, ಮಾಹಿತಿಯ ಕಣಜ, ರಾಜಕೀಯ, ಅಪರಾಧ ವಿಭಾಗಳಲ್ಲಿ ವರದಿಗಾರರಾಗಿದದ್ದರೂ ಟೆಕ್ನಾಲಜಿ ಕುರಿತು ಬರೆಯುವ ಶ್ರೇಷ್ಠ ಲೇಖಕರಲ್ಲಿ ಇವರು ಒಬ್ಬರು.ಅವರೇ ಹೊಸದಿಗಂತ ಪತ್ರಿಕೆಯ ಸಂಪಾದಕರಾದ ವಿನಾಯಕ್ ಭಟ್ ಮೂರೂರು.
ವರದಿಗಾರರಾಗಿ, ವಿಶೇಷ ಪ್ರತಿನಿಧಿಯಾಗಿ,ತಂತ್ರಜ್ಞಾನದ ಕುರಿತ ಲೇಖಕರಾಗಿ ಮತ್ತು ಪತ್ರಿಕೆಯ ಸಂಪಾದಕರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘ ಅನುಭವವಿರುವ ವಿನಾಯಕ್ ಭಟ್ ಅವರ ಜೊತೆಗಿನ ಸಂಭಾಷಣೆ ನಿಜಕ್ಕೂ ಅವಿಸ್ಮರಣೀಯವಾದದ್ದು.
ಪತ್ರಿಕೋದ್ಯಮದ ವಿದ್ಯಾರ್ಥಿಗಳು ಎಂದು ತಿಳಿದ ತಕ್ಷಣ ತಮ್ಮ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ನಮ್ಮೊಂದಿಗೆ ಸುಧೀರ್ಘ ಎರಡು ಗಂಟೆಗಳ ಕಾಲ ಮಾತನಾಡಿ ರಾಜಕೀಯ ವರದಿಗಾರಿಕೆ,ಟೆಕ್ನಾಲಜಿ ಕುರಿತ ಲೇಖನಗಳು ಹೇಗಿರಬೇಕು ಎನ್ನುವುದರ ಕುರಿತು ಮಾಹಿತಿ ಹಂಚಿಕೊಂಡರು.
ಅವರ ಸಂಭಾಷಣೆಯ ಪ್ರಮುಖ ಅಂಶಗಳು.......
ಮೊದಲು ದೆಹಲಿ ವರದಿಗಾರಿಕೆಯ ಕುರಿತು ಮಾತನಾಡಿದ ಅವರು "ದೆಹಲಿಯಲ್ಲಿ ಕರ್ನಾಟಕದ ಪತ್ರಕರ್ತರಿಗೆ ಹೆಚ್ಚಿನ ಸುದ್ದಿಗಳು ಸಿಗುವುದಿಲ್ಲ. ಸೆಷನ್ಸ್ ನಡೆಯುವ ವೇಳೆ ಮತ್ತು ರಾಜ್ಯ ನಾಯಕರು ಹೈಕಮಾಂಡ್ ಭೇಟಿಯಾಗಲು ಬಂದಾಗ ಮಾತ್ರ ವರದಿಗಾರರಿಗೆ ಕೆಲಸ. ಹೀಗಾಗಿ ದೆಹಲಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವರು ಸದಾ ಹೊಸ ಸುದ್ದಿಗಳನ್ನು ಹುಡುಕುತ್ತೀರಬೇಕು." ಎಂದು ಸಲಹೆ ನೀಡಿದರು.
ಇನ್ನು ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರು ತಂತ್ರಜ್ಞಾನದ ಕುರಿತು ಹೆಚ್ಚಿನ ಒಲವಿರುವ ವಿನಾಯಕ್ ಭಟ್ ಅವರು ಟೆಕ್ನಾಲಜಿ ಕುರಿತ ಲೇಖನಗಳ ಬಗ್ಗೆ ಮಾತನಾಡುತ್ತಾ "ಟೆಕ್ನಾಲಜಿ ಬಗ್ಗೆ ಬರೆಯಬೇಕೆಂದರೆ ಮೊದಲು ನಾವು ಟೆಕ್ನಾಲಜಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಭಾಷೆಯಲ್ಲಿ ಲೇಖನಗಳನ್ನು ಬರೆಯಬೇಕು. ಉದಾಹರಣೆಗೆ ಮಾರುಕಟ್ಟೆಗೆ ಬಂದ ಹೊಸ ಮೊಬೈಲ್ ಕುರಿತು ಬರೆಯುವಾಗ ಕೇವಲ ಅದರ ಸ್ಪೆಸಿಫಿಕೇಶನ್ ಬರೆಯದೆ ಅದು ಯಾವ ವರ್ಗದ ಜನರು ಖರೀದಿಸಿದರೆ ಸೂಕ್ತ ಮತ್ತು ಮಾರುಕಟ್ಟೆಯಲ್ಲಿರುವ ಬೇರೆ ಮೊಬೈಲ್ ಗಳಿಗಿಂತ ಇದು ಹೇಗೆ ಭಿನ್ನವಾಗಿದೆ ಎಂದು ಹೋಲಿಕೆ ಮಾಡಿ ಬರೆದರೆ ಜನ ಹೆಚ್ಚು ಇಷ್ಟಪಡುತ್ತಾರೆ" ಎಂದರು.
ಅವರ ಜೊತೆಗಿನ ಸಂಭಾಷಣೆ, ಲೇಖನ ಬರೆಯುವುದರ ಕುರಿತು ನಮ್ಮ ಜ್ಞಾನ ಹೆಚ್ಚಿಸುವುದರ ಜೊತೆಗೆ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿತು.
ಹೀಗೆ ತಮ್ಮ ಅನುಭವದ ಮೂಲಕ ಪತ್ರಿಕೋದ್ಯಮದ ಕುರಿತು ಸಾಕಷ್ಟು ಮಾಹಿತಿ ನೀಡಿದ ವಿನಾಯಕ್ ಭಟ್ ಅವರಿಗೆ ನನ್ನ ವತಿಯಿಂದ ಹಾಗೂ ಆಲ್ಮಾ ಮೀಡಿಯಾ ಸ್ಕೂಲ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು.