ಕ್ಯಾಬ್ ಡ್ರೈವರ್ ಹಾಗೂ ವೇಶ್ಯೆಯ ಹೃದಯಸ್ಪರ್ಶಿ ಪ್ರೇಮ್ ಕಹಾನಿ.
ಕ್ಯಾಬ್ ಡ್ರೈವರ್ ಸುರೇಶ್ (ಹೆಸರು ಬದಲಾಯಿಸಲಾಗಿದೆ) ಏರ್ ಪೋರ್ಟ್ ನಿಂದ ಬನ್ನೇರು ಘಟ್ಟಕ್ಕೆ ಮರಳುತ್ತಿದ್ದ. ದಾರಿ ಮದ್ಯೆ ಹುಡುಗಿಯೊಬ್ಬಳು ವಾಹನಕ್ಕಾಗಿ ಕೈ ಬೀಸುತ್ತಾಳೆ. ಗಿರಾಕಿಯನ್ನು ಕ್ಯಾಬ್ ಒಳಗೆ ಕೂರಿಸಿಕೊಂಡ ಸುರೇಶ್ ಡ್ರಾಪ್ ಪಾಯಿಂಟ್ ಕೇಳುತ್ತಾನೆ. ಆಕೆ ಹೋಗಬೇಕಾಗಿದ್ದು 18 ರಿಂದ 20 ಕಿಲೋ ಮೀಟರ್.
ಸುರೇಶ್ ನೊಡನೆ ಮಾತಿಗಿಳಿದ ಹುಡುಗಿ ಮಾತನಾಡುತ್ತ ಮಾತನಾಡುತ್ತ ತನ್ನ ಜೀವನದ ಕರಾಳ ಸತ್ಯವನ್ನು ಬೆತ್ತಲಾಗಿಸುತ್ತಾಳೆ. ನಾನು ಇಲ್ಲಿ ಬಂದಿದ್ದು ಒಬ್ಬ ಗಿರಾಕಿಗಾಗಿ ಅಂದಾಗ ಸುರೇಶನಿಗೆ ಕೊಂಚ ಇರಿಸುಮುರಿಸು. ಆದರೆ ಆಕೆ ಅದನ್ನು ಅಲ್ಲಿಗೇ ನಿಲ್ಲಿಸದೇ ಮಾತು ಮುಂದುವರಿಸುತ್ತಾಳೆ. ತನ್ನ ಜೀವನದ ಯಾತನಾದಾಯಕ ಕಥೆಯನ್ನು ಹೇಳತೊಡಗುತ್ತಾಳೆ.
ನಾನು ಮಂಡ್ಯದವಳು. ಹುಟ್ಟಿ ಬೆಳೆದಿದ್ದು ಒಂದು ಸಣ್ಣ ಹಳ್ಳಿಯಲ್ಲಿ . ಮನೆಯಲ್ಲಿ ಕಿತ್ತು ತಿನ್ನುವ ಬಡತನ . ಓದಿದ್ದು ಹತ್ತನೇ ತರಗತಿ. ಮನೆಯ ಪರಿಸ್ಥಿತಿಗೆ ಮರುಗಿ ದೊಡ್ಡಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಕರೆದುಕೊಂಡು ಬಂದರು. ಹೊಸ ಊರು ಅಪರಿಚಿತ ಮುಖಗಳು. ಇವಲ್ಲದರ ಮದ್ಯೆ ನಾನು ಅರಗಿಸಿಕೊಳ್ಳಲಾದಗದ ಸತ್ಯ ಎಂದರೆ ದೊಡ್ಡಮ್ಮ ನನ್ನ ದೇಹವನ್ನು ದುಡ್ಡಿಗಾಗಿ ಮಾರಿದಾಗ. ಮಾಯಾನಗರಿಯ ಕತ್ತಲಿನಿಂದ ಹೊರಬರಲಾಗದೇ ನರಳುತ್ತಿದ್ದ ನನಗೆ ಕತ್ತಲಿನ ಹೊನಲೇ ಹೊಟ್ಟೆಪಾಡಿನ ವೃತ್ತಿಯಾಗಿಸಿತ್ತು. ನನ್ನ ಕುಟುಂಬಕ್ಕೆ ಮೂರು ಹೊತ್ತಿನ ಊಟ ಸಿಕ್ಕಿತ್ತು ಎನ್ನು ವಷ್ಟರಲ್ಲಿ ಹುಡುಗಿಯ ಕಣ್ಣು ಮಂಜಾಗಿತ್ತು. ಸುರೇಶನ ಮನಸ್ಸು ಕದಡಿತ್ತು.
ಹುಡುಗಿಯನ್ನು ಸುರೇಶ್ ಡ್ರಾಪ್ ಮಾಡಿದನಾದರೂ ಆತನ ಮನಸ್ಸು ಆಕೆಯನ್ನು ಹಿಂಬಾಲಿಸಿತ್ತು. ಪರಸ್ಪರ ಪರಿಚಯ ನಿಧಾನಕ್ಕೆ ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಪರಿಸ್ಥಿತಿ ಬಂದಾಗ ಮನೆಯಿಂದ ಓಡಿ ಹೋಗುವ ತೀರ್ಮಾನಕ್ಕೆ ಬಂದರು.
ಇವರು ಊರು ಬಿಟ್ಟು ಪರ ಊರು ಸೇರಿಕೊಂಡಿದ್ದರೂ ಹುಡುಗಿಯ ದೊಡ್ಡಮ್ಮನಿಗೆ ಅವರನ್ನು ಹುಡುಕಿ ಹೊರಗೆಳೆಯುವುದು ದೊಡ್ಡ ವಿಷಯವಾಗಿರಲಿಲ್ಲ. ರೌಡಿಗಳನ್ನು ಛೂ ಬಿಟ್ಟು ಹುಡುಗಿಯನ್ನು ಎಳೆತಂದು ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ಕೊಟ್ಟಳು. ಹುಡುಗನ ಮನೆಯವರಿಗೆ ಧಮ್ಕಿ ಹಾಕಿದಳು. ಸೂಳೆಯನ್ನು ಮನೆ ತುಂಬಿಸಿಕೊಳ್ಳುತ್ತಿದ್ದೀರಿ ಎಂದು ಬೀದಿರಂಪ ಮಾಡಿದ್ದಳು. ಬಲವಂತವಾಗಿ ಆಕೆಯನ್ನು ಮತ್ತೆ ಕಾಮುಕರ ಹಾಸಿಗೆಗೆ ದಬ್ಬಿದ್ದಳು.
ಆದರೆ ಹುಡುಗಿ ಎದೆಗುಂದಿರಲಿಲ್ಲ. ಹುಡುಗ ಛಲಬಿಟ್ಟಿರಲಿಲ್ಲ. ಮತ್ತೆ ಈ ಪ್ರೇಮಿಗಳು ದೊಡ್ಡಮ್ಮನ ಕಣ್ಗಾವಲನ್ನು ತಪ್ಪಿಸಿ ಹೊರಬಂದರು. ಈ ಬಾರಿ ಇವರು ಹೋಗಿದ್ದು ನೇರವಾಗಿ ಪತ್ರಕರ್ತ ಅಜಿತ್ ಹನುಮಕ್ಕನವರ್ ಬಳಿಗೆ. ಅಜಿತ್ ಅವರ ಸಹಾಯದಿಂದ ಪೊಲೀಸ್ ಠಾಣೆಗೆ. ಪೊಲೀಸರ ಸಮ್ಮುಖದಲ್ಲಿ ಮದುವೆಯಾಯಿತು.ದೊಡ್ಡಮ್ಮನ ಮನೆ ಮೇಲೆ ರೇಡೂ ಆಯ್ತು. ಅದರೆ ಎಲ್ಲೂ ಸುದ್ದ ಹೊರ ಬರದ ಹಾಗೇ ನೋಡಿಕೊಂಡರು ಅಜಿತ್ ಹನುಮಕ್ಕನವರ್. ಈ ಪ್ರೇಮಿಗಳ ಕಥೆ ಸುಖಾಂತ್ಯ ಕಂಡಿತ್ತು…
ಈ ಕಥೆಯನ್ನು ಆಲ್ಮಾ ವಿದ್ಯಾರ್ಥಿಗಳಿಗೆ ಸುವರ್ಣ ನ್ಯೂಸ್ ಮುಖ್ಯ ಸಂದಾದಕ ಅಜಿತ್ ಹನಮಕ್ಕನವರ್ ಹೇಳಿಮುಗಿಸುತ್ತಿದ್ದಂತೆ ಎಲ್ಲರೂ ಭಾವುಕರಾಗಿದ್ದರು.
ಹುಸೇನ್ ಭಾಷಾ
ಇದರ ಲಿಂಕ್ ಇಲ್ಲಿದೆ.
https://youtu.be/ZHUIMD_VCII