ಕನಕಪುರಕ್ಕೆ ಮಂಜೂರು ಮಾಡಿದ್ದ ಮೆಡಿಕಲ್ ಕಾಲೇಜ್ ನೀಡಿ: ಬಿ.ಎಸ್.ವೈ ಗೆ ಡಿ.ಕೆ.ಶಿ ಮನವಿ...!

2018ರಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಗೊಳಿಸಿದ್ದ ವಿಚಾರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್, ಪುನಃ ತಮ್ಮ ಕ್ಷೇತ್ರಕ್ಕೆ ಮೆಡಿಕಲ್ ಕಾಲೇಜನ್ನು ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ.

ಡಿ.ಕೆ.ಶಿವಕುಮಾರ್ ನೇತೃತ್ವದ ರಾಮನಗರ, ಕುಣಿಗಲ್, ಮಾಗಡಿ ಮತ್ತು ಬೆಂಗಳೂರು ಗ್ರಾಮೀಣ ಜಿಲ್ಲೆಯ ನಾಯಕರ ನಿಯೋಗವು, ಕನಕಪುರಕ್ಕೆ  ಮೆಡಿಕಲ್ ಕಾಲೇಜ್ ಸ್ಥಾಪನೆ ವಿಚಾರವಾಗಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಇವರು ಕನಕಪುರದಲ್ಲಿ ಮೆಡಿಕಲ್ ಕಾಲೇಜಿನ ಅವಶ್ಯಕತೆಯ ಜೊತೆಗೆ, ಆ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗಿರುವ ಇತರೆ ಕಾರ್ಯಗಳ ಬಗ್ಗೆ ಸಹ ಸಿಎಂ ಜೊತೆಗೆ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್, 2018ರಲ್ಲಿ  ಮೈತ್ರಿ ಸರ್ಕಾರ ಕನಕಪುರಕ್ಕೆ ಮಂಜೂರು ಮಾಡಿದ್ದ ಮೆಡಿಕಲ್ ಕಾಲೇಜನ್ನು, ಆಗ ವಿಪಕ್ಷ ನಾಯಕರಾಗಿದ್ದ ಬಿಎಸ್ ಯಡಿಯೂರಪ್ಪನವರೇ ಅನುಮೋದನೆ ಮಾಡಿರುವ ಬಜೆಟ್ ಕಾಪಿಯನ್ನು ಯಡಿಯೂರಪ್ಪನವರ ಮುಂದೆ ಇಟ್ಟರು. 2018ರಲ್ಲಿ ತಾವೇ ಕನಕಪುರಕ್ಕೆ ಮೆಡಿಕಲ್ ಕಾಲೇಜನ್ನು ಅನುಮೋದನೆ ಮಾಡಿದ್ದರಿಂದ, ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಿ ಎಂದು ಡಿ.ಕೆ.ಶಿ ಅವರು ಬಿಎಸ್.ಯಡಿಯೂರಪ್ಪನವರಲ್ಲಿ ಕೇಳಿಕೊಂಡರು.

ಈ ಹಿಂದೆ ಸಹ ಡಿಕೆಶಿ ಅವರು ಬಿ.ಎಸ್.ವೈಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು. ಕನಕಪುರಕ್ಕೆ ಮೆಡಿಕಲ್ ಕಾಲೇಜ್ ನೀಡದಿದ್ದರೆ ಉಗ್ರ ಪ್ರತಿಭಟನೆ ಮಾಡುತ್ತೇವೆಂದು ಸಹ ಎಚ್ಚರಿಕೆ ನೀಡಿದ್ದರು.

ಕನಕಪುರ ಹಿಂದುಳಿದ ತಾಲೂಕಿಗೆ ಸೇರಿದ್ದು, ಈ ಕ್ಷೇತ್ರಕ್ಕೆ ವೈದ್ಯಕೀಯ ಮೂಲಸೌಕರ್ಯ ಕೊಡಬೇಕೆಂಬ ಹಿತದೃಷ್ಟಿಯಿಂದ ನಂಜುಂಡಪ್ಪ ಸಮಿತಿ ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಬೇಕು ಎಂಬ  ಪ್ರಸ್ತಾವವನ್ನು ಮಾಡಿದ್ದರು ಎಂಬ ವಿಷಯವನ್ನು ಸಹ ಡಿಕೆ ಶಿವಕುಮಾರ್ ಈ ಸಭೆಯಲ್ಲಿ ಹೇಳಿದರು.