ಇಂದು ಮಂಡನೆಯಾಗಲಿದೆ ರಾಜ್ಯ ಬಜೆಟ್ : ಆದಾಯ ಕೊರತೆ ಸವಾಲು : ಸಂಪನ್ಮೂಲ ಕ್ರೋಢಿಕರಣಕ್ಕೆ ಒತ್ತು...

ಬೆಂಗಳೂರು : ಆರ್ಥಿಕ ಹಿಂಜರಿತದ ಕಾರಣದಿಂದ ರಾಜ್ಯ ಸರ್ಕಾರ ಆದಾಯ ಕೊರತೆ ಅನುಭವಿಸುತಿದ್ದು, ಜನಪ್ರಿಯ ಯೋಜನೆಗಳ ಘೋಷಣೆಗೆ ಅನುದಾನ ಕೊರತೆ ಉಂಟಾಗುತ್ತಿದೆ. ಇಂಥ ಸವಾಲಿನ ಮಧ್ಯೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ 2020- 21 ನೇ ಸಾಲಿನ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ 3 ಲಕ್ಷ ಕೋಟಿಗೂ ಹೆಚ್ಚು ಸಾಲದ ಸುಳಿಗೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಸಾಲದ ಹೊರೆ ಹೆಚ್ಚಾಗದಂತೆ ನೋಡಿಕೊಳ್ಳಬೇಕಿದೆ. ಇನ್ನು ಕಳೆದ
ಬಾರಿಯ ಬಜೆಟ್ ಗಾತ್ರ ₹ 2, 34,154 ಕೋಟಿ ಆಗಿದ್ದು ಈ ಬಾರಿ ₹2,50,000 ಕೋಟಿ ದಾಟುವ ನಿರೀಕ್ಷೆ ಇದೆ.

ಆದಾಯ ಹೆಚ್ಚಳಕ್ಕೆ ಕ್ರಮ....

ರಾಜ್ಯ ಸರ್ಕಾರದ  ಆದಾಯ ಗಳಿಕೆ ತೀವ್ರ ಕುಸಿದಿದ್ದು, ವಿತ್ತೀಯ ಕೊರತೆ ಉಂಟಾಗುವ ಸಾಧ್ಯತೆ ಇದೆ. ಸಾರಿಗೆ, ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಹೀಗೆ ಹಲವು ಇಲಾಖೆಗಳಲ್ಲಿ ಆದಾಯ ಕುಸಿತಗೊಂಡಿದೆ. ಆದ್ದರಿಂದ ಈ ಹಣಕಾಸು ವರ್ಷದಲ್ಲಿ ಸಾರಿಗೆ ಹಾಗೂ ಅಬಕಾರಿ ಇಲಾಖೆಗಳ ಮೂಲಕ ಆದಾಯ ಹೆಚ್ಚಳಕ್ಕೆ ಸರ್ಕಾರ ಮುಂದಾಗಲಿದೆ.

ಕೃಷಿ, ನೀರಾವರಿಗೆ  ಹೆಚ್ಚಿನ ಒತ್ತು ಸಾಧ್ಯತೆ.....

ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯ ಸರ್ಕಾರ ಈ ಸಾಲಿನ ಬಜೆಟ್ ನಲ್ಲಿ ಯಾವುದೇ ಜನಪ್ರಿಯ ಘೋಷಣೆ ಮಾಡುವುದು ಅನುಮಾನ. ಆದರೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ನಿರಿಕ್ಷೇ ಇದೆ. ಕೃಷಿ ಜೊತೆಗೆ ನೀರಾವರಿಗೂ ಬಜೆಟ್ ನಲ್ಲಿ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದ್ದು, ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಮಹದಾಯಿ ಯೋಜನೆಗಳಿಗೆ ಸಿಎಂ ಯಡಿಯೂರಪ್ಪ ಅನುದಾನ ಘೋಷಣೆ ಮಾಡಲಿದ್ದಾರೆ. ಇನ್ನು ರಾಜ್ಯದ ಆರ್ಥಿಕ ಹೊರೆ ತಗ್ಗಿಸಲು ಹಿಂದಿನ ಸರ್ಕಾರಗಳ ಕೆಲವೊಂದು ಜನಪ್ರಿಯ ಯೋಜನೆಗಳನ್ನು ಕೈಬಿಡುವ ಸಾಧ್ಯತೆಯು ಇದೆ.