ಕುಂಕುಮಾದಿ ತೈಲ ಬಳಸಿ ತ್ವಚೆಯ ಸೌಂದರ್ಯ ಹೆಚ್ಚಿಸಿ....

ಕುಂಕುಮಾದಿ ತೈಲವನ್ನು ತ್ವಚೆ ಸೌಂದರ್ಯ ವೃದ್ಧಿಸಲೆಂದೇ 16-21 ಗಿಡ ಮೂಲಿಕೆಗಳನ್ನು ಬಳಸಿ ಈ ಎಣ್ಣೆ ತಯಾರಿಸಲಾಗಿರುತ್ತದೆ, ಇದರಲ್ಲಿ ಪ್ರಮುಖವಾಗಿ ಕೇಸರಿಯನ್ನು ಬಳಸಲಾಗಿರುತ್ತದೆ. 

ಕೇಸರಿ ಮುಖ ಕಾಂತಿ ಹೆಚ್ಚಿಸುವುದರ ಜತೆಗೆ ಡಾರ್ಕ್‌ಸರ್ಕಲ್, ಮುಖದ ಮೇಲೆ ಬೀಳುವ ಕಪ್ಪು ಕಲೆಗಳು ಇವುಗಳನ್ನು ಹೋಗಲಾಡಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿರುವ ಆಯಂಟಿಸೆಪ್ಟಿಕ್ ಗುಣ ತ್ವಚೆ ಆರೈಕೆಯಲ್ಲಿ ಸಹಕಾರಿಯಾಗಿದೆ. ಇನ್ನು ಈ ತೈಲದಲ್ಲಿ ಹಾಲು, ಲಾವಂಚ ಇವುಗಳನ್ನು ಬಳಸಲಾಗಿರುತ್ತದೆ, ಆದ್ದರಿಂದ ಈ ಎಣ್ಣೆ ತ್ವಚೆಯನ್ನು ಕ್ಲೆನ್ಸ್ ಮಾಡಿ, ಅನೇಕ ತ್ವಚೆ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಿ ಸೌಂದರ್ಯ ವೃದ್ಧಿಸುವಲ್ಲಿ ಸಹಕಾರಿಯಾಗಿದೆ.

ಕುಂಕುಮಾದಿ ತೈಲವನ್ನು ಬಳಸುವುದರಿಂದ ಈ ರೀತಿಯ ಸೌಂದರ್ಯವರ್ಧಕ ಗುಣಗಳನ್ನು ಪಡೆಯಬಹುದು:

1. ಮುಖದ ಮೇಲೆ ಬೀಳುವ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ

ಮುಖ ಹಾಗು ಮೂಗಿನ ಮೇಲೆನ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಕುಂಕುಮಾದಿ ತೈಲ ತುಂಬಾ ಪರಿಣಾಮಕಾರಿಯಾಗಿದೆ. ಈ ಎಣ್ಣೆಯನ್ನು ಪ್ರತಿದಿನ ಹಚ್ಚುತ್ತಿದ್ದರೆ ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಿ, ಮುಖದ ಹೊಳಪು ಹೆಚ್ಚುವುದು.

2.ಮೊಡವೆ ಹೋಗಲಾಡಿಸುತ್ತದೆ

ಇದರಲ್ಲಿರುವ ಆಯಂಟಿಆಕ್ಸಿಡೆಂಟ್‌, ಆಯಂಟಿಬ್ಯಾಕ್ಟಿರಿಯಾ ಹಾಗೂ ಉರಿಯೂತ ಕಡಿಮೆ ಮಾಡುವ ಗುಣಗಳು ಮೊಡವೆ ಸಮಸ್ಯೆ ಹೋಗಲಾಡಿಸಿ, ಮುಖ ಕಾಂತಿ ಹೆಚ್ಚಿಸುತ್ತದೆ. ಇದರಲ್ಲಿರುವ ಹಾಲಿನಂಶ ಮುಖದಲ್ಲಿರುವ ನಿರ್ಜೀವ ತ್ವಚೆಯನ್ನು ಹೋಗಲಾಡಿಸಿ ತ್ವಚೆ ಮೃದುವಾಗುವಂತೆ ಮಾಡುತ್ತದೆ. ಇನ್ನು ಮುಖದ ಸೆಬಮ್ ಸಮತೋಲನ ಕಾಪಾಡುವಲ್ಲಿ ಈ ಎಣ್ಣೆ ಪ್ರಯೋಜನಕಾರಿಯಾಗಿದೆ.

3.ಮುಖದಲ್ಲಿ ನೆರಿಗೆ ಬೀಳುವುದನ್ನು ತಡೆಗಟ್ಟುತ್ತದೆ

ಕುಂಕುಮಾದಿ ತೈಲ ಬಳಸಿ ಮಸಾಜ್‌ ಮಾಡುವುದರಿಂದ ಅಕಾಲಿಕ ನೆರಿಗೆ ತಡೆಗಟ್ಟಬಹುದು. ವಯಸ್ಸಾಗುತ್ತಿದ್ದರೂ ತ್ವಚೆ ಸೌಂದರ್ಯ ಒಂದಿಷ್ಟೂ ಮಂಕಾಗದೆ ಹೊಳಪಿನಿಂದ ಕೂಡಿರಲು ಕುಂಕುಮಾದಿ ತೈಲ ಸಹಾಯ ಮಾಡುತ್ತದೆ.

4. ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ

ಕುಂಕುಮಾದಿ ತೈಲದಲ್ಲಿ ಕೇಸರಿ ಇರುವುದರಿಂದ ಬಿಸಿಲಿಗೆ ಹೋದಾಗ ತ್ವಚೆ ರಕ್ಷಣೆ ಮಾಡುತ್ತದೆ. ಕೇಸರಿ ಮುಖ ಅಂದ ರಕ್ಷಿಸುವುದು ಮಾತ್ರವಲ್ಲ ಸೂರ್ಯ ನೇರಳಾತೀತ ಕಿರಣಗಳಿಂದಲೂ ರಕ್ಷಣೆ ನೀಡುತ್ತದೆ. ಇದು ಬಿಸಿಲಿಗೆ ಹೀದಾಗ ಮುಖ ಕಪ್ಪಾಗುವುದನ್ನು ತಡೆಯುತ್ತದೆ.

ಕುಂಕುಮಾದಿ ಎಣ್ಣೆ ಬಳಸುವುದು ಹೇಗೆ?

* ಮುಖವನ್ನು ತೊಳೆದು ಮೃದವಾದ ಟವಲ್‌ನಿಂದ ಒರೆಸಿ

* ಈಗ ಸ್ವಲ್ಪ ಕುಂಕುಮಾದಿ ತೈಲ ನಿಮ್ಮ ಅಂಗೈಗೆ ಹಾಕಿ ಮುಖದ ಮೇಲೆ 5 ನಿಮಿಷ ಮೆಲ್ಲನೆ ಮಸಾಜ್ ಮಾಡಿ ಎರಡು ತಾಸು ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸೂಚನೆ: ಕುಂಕುಮಾದಿ ತೈಲ ಎಲ್ಲಾ ಬಗೆಯ ತ್ವಚೆಯವರು ಬಳಸಬಹುದಾಗಿದ್ದು, ಎಣ್ಣ ತ್ವಚೆಯವರು ಬಳಸಿದರೆ ತ್ವಚೆ ಮತ್ತಷ್ಟು ಎಣ್ಣೆ-ಎಣ್ಣೆಯಾಗುವುದರಿಂದ ತುಂಬಾ ಹೊತ್ತು ಇಡಬೇಡಿ, ಹಚ್ಚಿ 10 ನಿಮಿಷವಾದ ಮೇಲೆ ತೊಳೆದುಬಿಡಿ.9