ಬಿಗ್ ಬಾಸ್ ಸೀಸನ್‌ 8 ಆರಂಭ

 

ಇದೇ ಭಾನುವಾರದಿಂದ ಕನ್ನಡ ಬಿಗ್ ಬಾಸ್ 8 ಆರಂಭವಾಗಲಿದೆ. ಬಿಗ್ ಬಾಸ್ ಆರಂಭವಾಗುವುದಕ್ಕೂ ಮೊದಲು ಈ ಕುರಿತು ನಟ ಸುದೀಪ್ ಹಾಗೂ ಕಲರ್ಸ್ ಕನ್ನಡ ಹೆಡ್ ಪರಮೇಶ್ವರ್ ಗುಂಡ್ಕಲ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ವೇಳೆ ಬಿಗ್ ಬಾಸ್ 8 ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ. ಮೊದಲು ಮಾತು ಆರಂಭಿಸಿದ ಪರಮೇಶ್ವರ್ ಗುಂಡ್ಕಲ್, ಇದು 8ನೇ ಸೀಸನ್ . ಬೇರೆ ಬೇರೆ ವ್ಯಕ್ತಿಗಳ ನಡುವಳಿಕೆಗಳನ್ನು ತೋರಿಸೋ ಶೋ. ಈ ಶೋ ಮುಖ್ಯವಾಗಿ  ಆಕ್ಷನ್-ರಿಯಾಕ್ಷನ್ಗಳನ್ನು ಒಳಗೊಂಡಿರುತ್ತದೆ. ಭಾನುವಾರ  ಸಂಜೆ 6 ಗಂಟೆಗೆ ಬಿಗ್ ಬಾಸ್ ಶುರು ಆಗಲಿದೆ. ನಿತ್ಯ 9:30ಕ್ಕೆ ಬಿಗ್ ಬಾಸ್ ಪ್ರಸಾರವಾಗಲಿದೆ ಎಂದರು.
ಈ ಬಾರಿ ಎಷ್ಟು ಸ್ಪರ್ಧಿಗಳು ಇರುತ್ತಾರೆ ಎನ್ನುವ ಪ್ರಶ್ನೆಗೆ ಪರಮೇಶ್ವರ್ ಗುಂಡ್ಕಲ್ ಉತ್ತರಿಸಿದ್ದಾರೆ. ಈ ಬಾರಿ 17 ಸ್ಪರ್ಧಿಗಳನ್ನು ಮನೆಗೆ ಕಳುಹಿಸಬೇಕು ಎನ್ನುವ ಉದ್ದೇಶ ಇದೆ. ಇವರನ್ನು ಈಗಾಗಲೇ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಯಾರಾದರೂ ಒಬ್ಬರಿಗೆ ಪಾಸಿಟಿವ್  ಬಂದರೂ ಅವರನ್ನು ಮನೆ ಒಳಗೆ ಕಳುಹಿಸೋಕೆ ಆಗಲ್ಲ. ಹೀಗಾಗಿ ಈಗಲೇ ಸ್ಪರ್ಧಿಗಳ ಲೆಕ್ಕ ನೀಡೋಕೆ ಆಗಲ್ಲ ಎಂದಿದ್ದಾರೆ ಅವರು.
ಈ ಬಾರಿಯದ್ದು ಸೆಲೆಬ್ರಿಟಿ ಸೀಸನ್ . ಹೀಗಾಗಿ, ಜನಸಾಮಾನ್ಯರು ಮನೆ ಒಳಗೆ ಹೋಗಲ್ಲ. ಸ್ಪರ್ಧಿಗಳಿಗೆ ಬಯೋಬಬಲ್ ಕ್ರಿಯೇಟ್ ಮಾಡೋಕೆ ಇರುವುದರಿಂದ ತುಂಬಾನೇ ಎಚ್ಚರಿಕೆ ವಹಿಸಿ ಈ ಬಾರಿಯ  ಸ್ಪರ್ಧಿಗಳನ್ನು ಕಳುಹಿಸುತ್ತಿದ್ದೇನೆ. ಬಿಗ್ ಬಾಸ್ ಮನೆ ತುಂಬಾನೇ ಭಿನ್ನವಾಗಿದೆ. ಗಾರ್ಡನ್ ಏರಿಯಾ ಬದಲಾಯಿಸಲಾಗಿದೆ. ಈ ಬಾರಿ ಬಿಗ್ ಬಾಸ್ ವೂಟ್ ನಲ್ಲಿ ಲೈವ್ ಮೂಲಕ 24 ಗಂಟೆಗಳ ಕಾಲ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಿದರು.
ಬಿಗ್ ಬಾಸ್ ಸೀಸನ್ 9ರ ಬಗ್ಗೆ ಮಾಹಿತಿ ನೀಡಿದ ಪರಮೇಶ್ವರ್, ಬಿಗ್ ಬಾಸ್ 8, 100 ದಿನಗಳ ನಂತರ ಪೂರ್ಣಗೊಳ್ಳುತ್ತಿದೆ. ಐಪಿಎಲ್ ಮಾದರಿಯಲ್ಲೇ ಈ ಬಾರಿಯ ಬಿಗ್ ಬಾಸ್ ವೇಳಾಪಟ್ಟಿ ಕೂಡ ಸ್ವಲ್ಪ ಆಚೀಚೆ ಆಗಿದೆ. ಹೀಗಾಗಿ, ಬಿಗ್ ಬಾಸ್ 9 ಸಣ್ಣ ಗ್ಯಾಪ್ ನಂತರ ಬರುವ ಸಾಧ್ಯತೆ ಇದೆ. ಬಿಗ್ ಬಾಸ್ 9 ನವೆಂಬರ್ ನಲ್ಲಿ ಬರುವ ಸಾಧ್ಯತೆ ಇದೆ ಎಂದಿದ್ದಾರೆ.
ಪ್ರೋಮೋ ಮಾಡೋದು ತುಂಬಾನೇ ಮಜಾ ಇತ್ತು. ಈ ಬಾರಿಯ ಪ್ರೋಮೋಗಳು ತುಂಬಾನೇ ಇಷ್ಟವಾಗಿವೆ. ಈ ಬಾರಿ ಬಂದಿದ್ದು ಜನಸಾಮಾನ್ಯರ ಪ್ರೋಮೋ. ಬಿಗ್ ಬಾಸ್ ಅನ್ನು ನಾನು ಯಾವಾಗಲು ಎಂಜಾಯ್ ಮಾಡುತ್ತೇನೆ ಎಂದು ಸುದೀಪ್ ಮಾತು ಆರಂಭಿಸಿದರು.
ಇವರು ಸ್ಪರ್ಧಿಗಳನ್ನು ತಂದು ಮನೆ ಒಳಗೆ ಇಡುತ್ತಾರೆ. ಆದರೆ, ನಂತರ ಅವರನ್ನು ನಾನು ಹ್ಯಾಂಡಲ್ ಮಾಡಬೇಕು. ಮನೆ ಒಳಗೆ ಹೋದವರು ಹೀಗೆ ಆಡ್ತಾರೆ, ಹಾಗೆ ಆಡ್ತಾರೆ ಎಂದು ಹೇಳೋದು ಕಷ್ಟ. ಏನೋ ಮಾಡಲು ಹೋಗಿ ಏನೋ ಮಾಡಿದವರನ್ನ ನೋಡಿದ್ದೇನೆ. ಶೂಟಿಂಗ್ ಗೆ ಹೋಗುವಾಗ ಏನು ನಡೆಯುತ್ತೆ  ಎನ್ನುವುದು ಖಾತ್ರಿ ಇರುತ್ತದೆ. ಆದರೆ, ಇಲ್ಲಿ ಹಾಗೆ ಆಗುವುದಿಲ್ಲ. ಸ್ಪರ್ಧಿಗಳು ಏನು ಮಾತನಾಡುತ್ತಾರೋ ಅದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ ಎಂದಿದ್ದಾರೆ.

 

ವರದಿ : ನವಿತ