ದುಷ್ಕರ್ಮಿಗಳು ಅಟ್ಟಹಾಸಕ್ಕೆ ಮದುವೆ ಮನೆ ಮಸಣವಾಯ್ತು

ಬೆಳಗಾವಿ:-  ಮನೆಯಲ್ಲಿ ಮದುವೆಯ ಸಂಭ್ರಮ ತುಂಬಿ ತುಳುಕುತ್ತಿತ್ತು, ಗೋಡೆಗಳಿಗೆ ಬಣ್ಣ ಹಾಕಿ ಸಿಂಗರಿಸಲಾಗಿತ್ತು, ಇತ್ತ ಮದುಮಗ ಬಂಧು ಬಳಕ್ಕೆ ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿ ಹಂಚಲು ಪ್ಲ್ಯಾನ್​​​ ಮಾಡಿಕೊಳ್ಳುತ್ತಿದ್ದ. ಆದರೇ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಮದುವೆ ಸಮಾರಂಭಕ್ಕೆ ಸಿಂಗಾರಗೊಂಡಿದ್ದ ಗೋಡೆಯ ಮೇಲೆ ನೆತ್ತರು ಚಿಮ್ಮಿದೆ. ಒಂದೇ ಮನೆಯಲ್ಲಿ ಮೂರು ಜನರ ಸಾವಿಗೆ ಇಡೀ ಊರಿಗೆ ಊರೇ ಬೆಚ್ಚಿ ಬಿದ್ದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಜನರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶಿವಾನಂದ ಶೆಟ್ಟಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಆತನ ಮಡದಿ ಶಾಂತವ್ವಾ, ಪುತ್ರ ವಿನೋದ್ ಶಿವಾನಂದಶೆಟ್ಟಿ ಮೃತರು.

ನಿನ್ನೆ ಐದರಿಂದ ಆರು ಜನರ ದುಷ್ಕರ್ಮಿಗಳ ತಂಡ ಮನೆ ಬಾಗಿಲು ತೆಗೆಸಿ ಒಳ ನುಗ್ಗಿದ್ದಾರೆ ಬಾಗಿಲು ತೆಗೆದ ಮನೆ ಮಾಲೀಕನ ತಲೆಗೆ ರಾಡ್ ನಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ, ಬಳಿಕ ಒಳ ನುಗ್ಗಿ ಕೋಣೆಯಲ್ಲಿ ಮಲಗಿದ್ದ ಮಗ ವಿನೋದ್ ತಲೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಪಕ್ಕದ ಕೋಣೆಗೆ ತೆರಳಿ ತಾಯಿ ಶಾಂತವ್ವಾಗೆ ತಲೆಯ ಹಿಂಭಾಗಕ್ಕೆ ಹೊಡೆದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಇಲ್ಲಿ ಕೊಲೆಯಾಗಿರುವ ವಿನೋದ್ ಪಕ್ಕದ ಗ್ರಾಮದ ಯುವತಿಯ ಜೊತೆಗೆ ಇದೇ ತಿಂಗಳು 30ರಂದು ಮದುವೆ ನಿಶ್ಚಯವಾಗಿತ್ತು. ಮದುವೆ ಕಾರ್ಡ್ ಪ್ರಿಂಟ್ ಮಾಡಿಸಿ ನಾಳೆಯಿಂದ ಕಾರ್ಡ್ ಹಂಚಲು ಪ್ಲಾನ್ ಕೂಡ ಮಾಡಿಕೊಂಡಿದ್ದರು. ಇತ್ತ ಮನೆಗೆ ಸುಣ್ಣ ಬಣ್ಣ ಬಳಿದು ಸಿಂಗಾರ ಮಾಡಲಾಗಿತ್ತು. ಮದುವೆಗೆ ಬೇಕಾದ ಆಭರಣ, ಬಟ್ಟೆ ಸೇರಿದಂತೆ ಎಲ್ಲ ವಸ್ತುಗಳ ಖರೀದಿ ಕೂಡ ಆಗಿತ್ತು. ಮನೆಗೆ ನುಗ್ಗಿದ ದುಷ್ಕರ್ಮಿಗಳು ಸಂಭ್ರದಲ್ಲಿದ್ದ ಕುಟುಂಬದ ಸದಸ್ಯರನ್ನೆಲ್ಲಾ ಕೊಲೆ ಮಾಡಿ ಸರ್ವನಾಶ ಮಾಡಿದ್ದಾರೆ.‌ ಅಷ್ಟಕ್ಕೂ ಮೇಲ್ನೋಟಕ್ಕೆ ಕೊಲೆಗೆ ಆಸ್ತಿ ವಿಚಾರವೇ ಕಾರಣ ಎನ್ನಲಾಗುತ್ತಿದೆ.


ಒಂದು ವರ್ಷದ ಹಿಂದೆ ಶಿವಾನಂದ ಸಹೋದರ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆಸಿದ್ದನಂತೆ. ಶಿವಾನಂದ ಮನೆಯ ಪಕ್ಕದಲ್ಲಿ ಖಾಲಿ ಜಾಗಕ್ಕೆ ಆಗಾಗ ಜಗಳ ಕೂಡ ಆಗುತ್ತಿತ್ತು ಇದೇ ವಿಚಾರಕ್ಕೆ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತಪಡಿದ್ದಾರೆ.