ಅಲ್ಪ ಮೊತ್ತಕ್ಕೆ ಕುಸಿದ ಭಾರತ
ವೆಲ್ಲಿಂಗ್ಟನ್:ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಎರಡನೇ ದಿನದಾಟದಲ್ಲಿ 68.1 ಓವರ್‌ಗಳಲ್ಲಿ ಕೇವಲ 165 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ.ಮೊದಲ ದಿನ 122/5 ಗಳಿಸಿದ್ದು ಮಂದ ಬೆಳಕಿನ ಕಾರಣ ಆಟವನ್ನು ಸ್ಥಗಿತಗೊಳಿಸಲಾಗಿದ್ದು, ಎರಡನೇ ದಿನಕ್ಕೆ ರಹಾನೆ ಹಾಗೂ ಪಂತ್ ಜೋಡಿ ವಿಕೆಟ್ ಕಾಯ್ದಿರಿಸಿದ್ದರು,ಆದರೆ ಎರಡನೇ ದಿನದಾಟ ಮುಂದುವರಿಸಿದ ಭಾರತೀಯ ತಂಡವು 43 ರನ್ ಗಳಿಸಿ ಉಳಿದಿರುವ ಐದು ವಿಕೆಟುಗಳನ್ನು ಕಳೆದುಕೊಳ್ಳುವ ಮೂಲಕ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.
ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ವಿಕೆಟ್ ಕೀಪರ್ ರಿಷಬ್ ಪಂತ್ (19) ರನೌಟಾಗುವ ಮೂಲಕ ನಿರಾಸೆ ಮೂಡಿಸಿದರು. ರವಿಚಂದ್ರನ್ ಅಶ್ವಿನ್ ಖಾತೆ ತೆರೆಯದೆ ಪೆವಿಲಿಯನ್ ಸೇರಿದರು. ಇನ್ನೊಂದೆಡೆ ಉತ್ತಮವಾಗಿ ಆಡುತ್ತಿದ್ದ ಅಜಿಂಕ್ಯ ರಹಾನೆ ಅರ್ಧಶತಕ ಸಮೀಪ ಎಡವಿ ಬಿದ್ದರು. 138 ಎಸೆತಗಳನ್ನು ಎದುರಿಸಿದ ರಹಾನೆ ಐದು ಬೌಂಡರಿಗಳಿಂದ 46 ರನ್ ಗಳಿಸಿದರು.
ಕೊನೆಯಲ್ಲಿ 21 ರನ್‌ಗಳ ಉಪಯುಕ್ತ ಕಾಣಿಕೆ ನೀಡುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಶಮಿ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಇನ್ನುಳಿದಂತೆ ಇಶಾಂತ್ ಶರ್ಮಾ (5) ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ ಹಾಗೂ ಟಿಮ್ ಸೌಥಿ ತಲಾ ನಾಲ್ಕು ವಿಕೆಟುಗಳನ್ನು ಕಬಳಿಸುವ ಮೂಲಕ ಮೊದಲ ಇನಿಂಗ್ಸ್ ಗೌರವ ಒದಗಿಸಿದರು.