ಟ್ರಂಪ್ ಭೇಟಿ ವೇಳೆ ಭಾರತ - ಪಾಕ್ ದ್ವಿಪಕ್ಷೀಯ ಮಾತುಕತೆಗೆ ಪ್ರೊತ್ಸಾಹ....

ವಾಷಿಂಗ್ಟನ್ :  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವಂತೆ, ಟ್ರಂಪ್ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಭಾರತ - ಪಾಕ್ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಮಾತನಾಡಿದ್ದಾರೆ.

ಶುಕ್ರವಾರ ಸುದ್ದೀಗೋಷ್ಠಿ ವೇಳೆ "ಅಮೆರಿಕಾ,ಕಾಶ್ಮೀರ ವಿಚಾರವಾಗಿ ಮತ್ತೆ  ಭಾರತ ಹಾಗೂ ಪಾಕಿಸ್ತಾನದ ನಡುವಿನ ಗೊಂದಲ ಬಗೆಹರಿಸಲು ಮಧ್ಯಸ್ಥೀಕೆ ವಹಿಸುತ್ತದೇಯೆ" ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ  ಹಿರಿಯ ಅಧಿಕಾರಿ  "ಟ್ರಂಪ್ ಭಾರತ ಭೇಟಿ ವೇಳೆ ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಒತ್ತು ನೀಡಲಿದ್ದಾರೆ. ಉಭಯ ದೇಶಗಳಿಗೂ ಗಡಿ ನಿಯಂತ್ರಣ ರೇಖೆಯ ಬಳಿ ಶಾಂತಿ ಹಾಗೂ ಸ್ಥಿರತೆ ಕಾಯ್ದುಕೊಳ್ಳಲು ಮನವಿ ಮಾಡಲಾಗುವುದು. ಹಾಗೂ ಪರಿಸ್ಥಿತಿ ಉಲ್ಬಣಗೊಳ್ಳುವಂತ ಯಾವುದೇ ಹೇಳಿಕೆಗಳನ್ನು ಉಭಯ ದೇಶಗಳ ನಾಯಕರು ನೀಡದಂತೆ ಸೂಚನೆ ನೀಡಲಾಗುವುದು" ಎಂದು ಹೇಳಿದರು.

ಈ ಮೊದಲು ಇಮ್ರಾನ್ ಖಾನ್ ಭೇಟಿ ಸಂಧರ್ಭ ಡೊನಾಲ್ಡ್ ಟ್ರಂಪ್ , ಭಾರತ ಹಾಗೂ ಪಾಕ್ ನಡುವಿನ ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದರು. ಆದರೆ ಭಾರತ ಮಾತ್ರ ಈ ವಿಷಯದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದ್ದು , ಕಾಶ್ಮೀರ ವಿವಾದ ದ್ವಿಪಕ್ಷೀಯ ಸಮಸ್ಯೆಯಾಗಿದ್ದು ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ಸಹಿಸುವುದಿಲ್ಲ ಎಂದು ಹೇಳುವ ಮೂಲಕ ಅಮೆರಿಕದ ಪ್ರಸ್ತಾವವನ್ನು ತಿರಸ್ಕರಿಸಿತ್ತು.