ಮತ್ತೆ ಚುನಾವಣಾ ಅಕಾಡಕ್ಕೆ ಮಲ್ಲಿಕಾರ್ಜುನ್ ಖರ್ಗೆ....??

 

 ಬೆಂಗಳೂರು : ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತು ನಿರಾಸೆಗೊಳಗಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದಾರೆ.

 

 

ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅವರ ಅವಶ್ಯಕತೆ ಸಂಸತ್‌ನಲ್ಲಿ ಇದೆ ಎಂದು ಕಾಂಗ್ರೆಸ್ ಹೈಕಮಾಂಡ್ ನಿಶ್ಚಯಿಸಿರುವ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತೊಂದು ಅವಕಾಶ ನೀಡಲು ಚರ್ಚೆ ನಡೆದಿದೆ.

 

ಜೂನ್ ನಲ್ಲಿ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಸಲಿದ್ದು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿ ರಾಜ್ಯಸಭೆಗೆ ಕಳಿಸಲು ಮಾತುಕತೆಗಳು ಹೈಕಮಾಂಡ್ ಮಟ್ಟದಲ್ಲಿ ನಡೆದಿವೆ.

 

ಈಗಿರುವ ಸಂಖ್ಯಾಬಲದ ಅನುಸಾರ ಕಾಂಗ್ರೆಸ್ ಒಂದು ಮತ್ತು ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲ್ಲಬಹುದಾಗಿದೆ. ಜೆಡಿಎಸ್‌ ಸಂಖ್ಯಾಬಲ ಕಡಿಮೆ ಇರುವ ಕಾರಣ ಕಾಂಗ್ರೆಸ್‌-ಬಿಜೆಪಿಯ ನೆರವಿನೊಂದಿಗೆ ಒಂದು ಸ್ಥಾನ ಗೆಲ್ಲಬಹುದಾಗಿದೆ.

 

ಜೆಡಿಎಸ್‌ ಪಕ್ಷವು ದೇವೇಗೌಡ ಅವರನ್ನು ಕಣಕ್ಕೆ ಇಳಿಸುವ ಯೋಜನೆ ಹಾಕಿದೆ. ದೇವೇಗೌಡ ಅವರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್-ಬಿಜೆಪಿ ನೆರವು ನೀಡುವ ಸಾಧ್ಯತೆ ಇದೆ.

 

ಜೂನ್ ತಿಂಗಳಲ್ಲಿ ಕಾಂಗ್ರೆಸ್‌ನ ರಾಜೀವ್‌ ಗೌಡ, ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಪ್ರಭಾಕರ್ ಕೋರೆ, ಜೆಡಿಎಸ್‌ನ ಕುಪೇಂದ್ರರೆಡ್ಡಿ ಅವರು ನಿವೃತ್ತರಾಗುತ್ತಿದ್ದಾರೆ. ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

ಮಲ್ಲಿಕಾರ್ಜುನ ಖರ್ಗೆ ಹಾಗೂ ದೇವೇಗೌಡ ಇಬ್ಬರೂ ಸಹ ಕಳೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಹಾಗಾಗಿ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿಯುವ ಸಾಧ್ಯತೆ ಇದೆ.