ಬೆಂಗಳೂರಿನ ರೆಸಾರ್ಟ್ ಎದುರು ಪ್ರತಿಭಟನೆ ಮಾಡುತಿದ್ದ ದಿಗ್ವಿಜಯ ಸಿಂಗ್ ಪೋಲೀಸರ ವಶಕ್ಕೆ...

ಬೆಂಗಳೂರಿನ ರಮಡಾ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರನ್ನುಭೇಟಿಯಾಗಲು  ಇಂದು ಬೆಳಿಗ್ಗೆ  ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಬೆಂಗಳೂರಿಗೆ ಆಗಮಿಸಿದ್ದರು.

ಏರ್ಪೋರ್ಟ್ ನಲ್ಲಿ ದಿಗ್ವಿಜಯ ಸಿಂಗ್ ಅವರನ್ನು ಬರ ಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಕೃಷ್ಣಭೈರೇಗೌಡ ಕೆಲಕಾಲ ಅಲ್ಲಿಯೇ  ಸಮಾಲೋಚನೆ ನಡೆಸಿದರು.

ನಂತರ ರಮಡಾ ರೆಸಾರ್ಟ್ ಬಳಿ ಆಗಮಿಸಿದ ಕಾಂಗ್ರೆಸ್ ನಾಯಕರು ಬಂಡಾಯ ಶಾಸಕರನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ ಭೇಟಿಗೆ ಪೊಲೀಸರು ಅವಕಾಶ ನೀಡಲಿಲ್ಲ.ಈ ಸಂಧರ್ಭದಲ್ಲಿ ದಿಗ್ವಿಜಯ ಸಿಂಗ್ ರೆಸಾರ್ಟ್ ಬಳಿಯೇ ಪ್ರತಿಭಟನೆ ನಡೆಸಿದರು.ಭೇಟಿಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಕೈ ನಾಯಕರು ಹಾಗೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ದಿಗ್ವಿಜಯ ಸಿಂಗ್ " ನಾನೊಬ್ಬ ಹಿರಿಯ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ. ನಾನು ಈ ಬಾರಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ನಾನು ನನ್ನ ಮತದಾರರನ್ನು ಭೇಟಿಯಾಗಲು ಬಂದಿದ್ದೇನೆ. ಭೇಟಿಗೆ ಅವಕಾಶ ನೀಡದೇ ಒಬ್ಬ ಅಭ್ಯರ್ಥಿಯ ಹಕ್ಕು
ಕಿತ್ತುಕೊಳ್ಳಲಾಗುತ್ತಿದೆ ಎಂದು ದೂರಿದರು.

ಇನ್ನು ಪ್ರವೇಶ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ನಡೆದ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡರು.