ಸತೀಶ್ ನೀನಾಸಂ ಗೆ ಈ ಒಕ್ಕಣ್ಣ ಅಂದ್ರೆ ಬಲು ಅಚ್ಚು ಮೆಚ್ಚು...ಯಾರು ಈ ಒಕ್ಕಣ್ಣ...ಈ ಸ್ಟೋರಿ ಓದಿ...
ಲವ್ ಇನ್ ಮಂಡ್ಯ ಮಂಡ್ಯ ಚಿತ್ರೀಕರಣದಲ್ಲಿ ತೆಗೆದ ಚಿತ್ರ.
ಈ ಚಿತ್ರ ನೋಡಿ ಒಂದು ಕಥೆ ನೆನಪಾಯಿತು.
ನನಗಾಗ ಸುಮಾರು 12ವರ್ಷಗಳು ಇರಬೇಕು, ನಮ್ಮ ಮನೆಯವರು ದೇವರ ಹೆಸರಲ್ಲಿ, ಎರಡು ಮರಿ ಬೆಳೆಸಿದ್ರು, ಅದರಲ್ಲಿ ಒಂದು ಹೋತ, ಬೆಳೆದು ದೊಡ್ಡದಾಯಿತು.
ನಾವೆಲ್ಲ ಹೋದರು, ಊರೊಳಗೆ ಅದು ಎಲ್ಲೇ ಇದ್ದರೂ, ನಮ್ಮನ್ನು ನೋಡಿದ ತಕ್ಷಣ ಮೇ.... ಎಂದು ಕಿರುಚುತ್ತಾ, ಓಡಿ ಬರುತ್ತಿತ್ತು. ಅದರ ಮೇಲೆ ಹತ್ತಿ ಕೂರುವುದು, ಕಿವಿ ಹಿಡಿದು ಎಳೆಯುವುದು, ತಬ್ಬಿ ಮುದ್ದಾಡುವುದು, ಹೀಗೆ ನಮ್ಮ ಮನೆಯಲ್ಲಿ ಒಬ್ಬನಾಗಿದ್ದ ಒಕ್ಕಣ್ಣ. ಅವನ ವಿಶೇಷತೆಯೆಂದರೆ ರಾತ್ರಿ ಮನೆಯಲ್ಲಿ ಕಂಬಕ್ಕೆ ಕಟ್ಟಿದಾಗ, ರಾತ್ರಿಯಿಡೀ ಹುಚ್ಚೇ ಉಯ್ಯದೇ , ಬೆಳಗ್ಗೆ ಕಟ್ಟು ಬಿಚ್ಚಿದ ನಂತರ, ಹೊರಗೆ ಮನೆ ಮುಂದಲ ಮೋರಿಗೆ ಹೋಗಿ, ಎರಡು ಕಾಲುಗಳನ್ನು ಹಿಂದೆ, ಎರಡು ಕಾಲುಗಳನ್ನು ಮುಂದೆ ಹಾಕಿ, ಸರಿಯಾಗಿ ಮೋರಿಯಲ್ಲಿ ಹುಚ್ಚೇ ಮಾಡುತ್ತಿದ್ದ. ಸದಾ ಸ್ವಚ್ಛತೆಯನ್ನೇ, ಉಸಿರಾಡುತ್ತಿದ್ದ ನನ್ನವನಿಗೆ, ಈ ಒಕ್ಕಣನ ಶಿಸ್ತನ್ನು ಕಂಡು ಬಹಳ ಪ್ರೀತಿ. ಇವನ ಈ ಶಿಸ್ತನ್ನ ಕುರಿತು ನನ್ನ ಗೆಳೆಯರ ಜೊತೆ ಬಹಳ ಹೆಮ್ಮೆಯಿಂದ ಮಾತನಾಡಿದ್ದು ಇದೆ. ಕೆಲವೊಮ್ಮೆ ಸಂಜೆ ಮನೆಗೆ ಬರದೆ ಹೋದಾಗ, ಇವನಿಗಾಗಿ ನಾನು ಬೀದಿಬೀದಿಯಲ್ಲಿ ಅಲೆದದ್ದು ಇದೆ. ಮನೆಯವರಿಗೆಲ್ಲಾ ಅಚ್ಚುಮೆಚ್ಚಾಗಿದ್ದ ಒಕ್ಕಣ್ಣ, ತಡರಾತ್ರಿಯಾದರೂ ಮನೆ ಬಂದು ಸೇರುತ್ತಿದ್ದ. ಇವನಿಗೆ ಒಕ್ಕಣ್ಣ ಎಂದು ಕರೆಯಲು ಒಂದು ಕಾರಣವಿದೆ, ತುಂಬಾ ಸುಂದರವಾಗಿದ್ದ ಇವನು, ಬಲಿಷ್ಠನಾಗಿಯೂ ಬುದ್ಧಿವಂತನಾಗಿದ್ದ. ಉದಾಹರಣೆಗೆ ಸ್ವಲ್ಪ ಉತ್ಪ್ರೇಕ್ಷೆಯಿಂದ ಹೇಳುವುದಾದರೆ, ಬಾಹುಬಲಿ ಚಿತ್ರದಲ್ಲಿ ಬರುವ ಮಿನಿ ಗೂಳಿಯಂತೆ ಕಾಣುತ್ತಿದ್ದ.
ಒಂದು ದಿನ ಸಂಜೆ ಶಾಲೆ ಮುಗಿಸಿ ವಾಪಸ್ಸು ಬಂದಾಗ, ಅವ್ವ ಅಳುತ್ತಿದ್ದುದು, ಮನೆಯವರೆಲ್ಲ ಕಿರಿಚಿ ಯಾರಿಗೋ ಬೈಯುತ್ತಿದ್ದದ್ದು, ಕೇಳಿ ಆತಂಕಗೊಂಡು, ಮನೆ ಒಳಗೆ ಕಾಲಿಟ್ಟೆ. ಬೀದಿಯಿಂದ ಹಿಡಿದು ಬಚ್ಚಲು ಮನೆವರೆಗೂ ರಕ್ತ ಸೋರಿತ್ತು, ಗಾಬರಿಯಿಂದ ಎದೆ ಹೊಡೆದುಕೊಳ್ಳುತ್ತಿತ್ತು. ಒಳಗೆ ಹೋಗಿ ನೋಡಿದರೆ , ನಮ್ಮ ಪ್ರೀತಿಯ ಮನೆ ಮಗನಂತಿದ್ದ ಅವನಿಗೆ, ಯಾರೋ ಸರಿಯಾಗಿ ಕಣ್ಣಿಗೆ , ಯಾವುದೋ ಆಯುಧದಿಂದ ಚುಚ್ಚಿ ಒಂದು ಕಣ್ಣನ್ನೇ ಕಿತ್ತಿದ್ದರು, ಇದನ್ನು ನೋಡಿ ಇಡೀ ಮನೆಯೇ ಶೋಕದಲ್ಲಿ ಮುಳುಗಿತ್ತು. ಇಡೀ ರಾತ್ರಿ ನಿದ್ದೆ ಮಾಡದೇ ವಿಲ ವಿಲ ಒದ್ದಾಡಿದ ನೆನಪು ನನಗೆ ಇನ್ನೂ ಮಾಸಿಲ್ಲ. ಯಾವುದೇ ಮೇಕೆ ಮರಿಗಳನ್ನು ನೋಡಿದರು ಆ ಕಥೆ ಮತ್ತೆ ಮತ್ತೆ ನೆನಪಾಗುತ್ತದೆ. ಹೇಗೋ ಸದ್ಯ ಒಂದು ಕಣ್ಣು ಹೋದರು ಜೀವಕ್ಕೆ ಅಪಾಯ ಆಗಲಿಲ್ಲ. ನಾನು ಎಲ್ಲೇ ಹೋದರು ಅವನನ್ನು ಕರೆದು ತಕ್ಷಣ, ನನ್ನ ಧ್ವನಿ ಗುರುತು ಹಿಡಿದು, ಬಲಗಣ್ಣು ಕಾಣದಿದ್ದರೂ ತಿರುಗಿ ಎಡಗಣ್ಣಿನಿಂದ ನೋಡಿ ಓಡಿ ಬರುತ್ತಿದ್ದ. ಅವನಿಗೆ ನಾನಿಟ್ಟ ಹೆಸರು ಇಂದು ಒಕ್ಕಣ್ಣ. ಮಿಸ್ ಯೂ