ಅಕ್ರಮ ರೀಫಿಲ್ಲಿಂಗ್ ವೇಳೆ ಸಿಲಿಂಡರ್‌ಗಳ ಸ್ಫೋಟ, ಬೆಚ್ಚಿಬಿದ್ದ ಜನತೆ...!
ಬೆಂಗಳೂರು - ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಸಿಲಿಂಡರ್ ಗಳು ಸ್ಫೋಟಗೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡತೋಗೂರು ಬಳಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾಗ ಸಿಲಿಂಡರ್‍ಗಳು ಸ್ಫೋಟಗೊಂಡಿವೆ. ಇದರ ಪರಿಣಾಮವಾಗಿ ಹಲವು ಮನೆಗಳ ಮೇಲ್ಛಾವಣಿ ಜಖಂಗೊಂಡಿವೆ.
ವಸತಿ ಪ್ರದೇಶ ಹಾಗೂ ಶಾಲೆ ಬಳಿಯೇ ಅನಾಹುತ ಸಂಭವಿಸಿದ್ದು ಅದೃಷ್ಟವಶಾತ್ ಭಾರೀ ದುರಂತವೊಂದು ತಪ್ಪಿದಂತಾಗಿದೆ. ಸ್ಫೋಟದ ಶಬ್ದಕ್ಕೆ ಸುತ್ತಮುತ್ತಲಿನ ನಾಗರೀಕರು ಬೆಚ್ಚಿಬಿದ್ದಿದ್ದಾರೆ. ಒಂದು ಕ್ಷಣ ಬಾಂಬ್ ಸಿಡಿದಂತಹ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ಮನೆಯಿಂದ ನಾಗರೀಕರು ಹೊರ ಓಡಿ ಬಂದರು.
ಈ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಸಿಲಿಂಡರ್‍ಗಳಿಗೆ ಗ್ಯಾಸ್ ರಿಫಿಲ್ಲಿಂಗ್ ದಂಧೆ ನಡೆಯುತ್ತಲೇ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಘಟನೆ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.