ಗುರು ಶಿಷ್ಯರೊಂದಿಗೆ ಬರುತ್ತಿದ್ದಾರೆ ಶರಣ್‌

ನಟ ಶರಣ್ ಅಭಿನಯದ ಚಿತ್ರದ ಟೈಟಲ್ ದ್ವಾರಕೀಶ್ ಅವರು ಬಿಡುಗಡೆ ಮಾಡಿದರುಶೀರ್ಷಿಕೆ ಬಿಡುಗಡೆಯ ಕಾರ್ಯಕ್ರಮ ದ್ವಾರಕೀಶ್ ಅವರ ಮನೆಯಲ್ಲಿ ನಡೆಯಿತು. ಮೊದಲನೆ ಬಾರಿಗೆ ನಟ ಶರಣ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಸಿನಿಮಾವನ್ನು ನಿರ್ಮಿಸುತ್ತಿದ್ದು, ತರುಣ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಜಡೇಶ್ ಹಂಪಿ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದೆಬಿ ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ.

ಚಿತ್ರರಂಗದ ಹಿರಿಯ ನಟ, ನಿರ್ದೇಶಕ,ನಿರ್ಮಾಪಕರಾದ ದ್ವಾರಕೀಶ್ ಅವರು ಚಿತ್ರದ ಟೈಟಲ್ ಅನಾವರಣಗೊಳಿಸಿದರು. ಶರಣ್ ಅಭಿನಯದ ಹೊಸ ಚಿತ್ರದ ಹೆಸರು ಗುರು ಶಿಷ್ಯರು. ದ್ವಾರಕೀಶ್ ಅವರು ಅಭಿನಯಿಸಿದ್ದ ಹಳೆ ಚಿತ್ರದ ಹೆಸರು ಸಹ ಗುರು ಶಿಷ್ಯರೇ ಆಗಿತ್ತು. ಚಿತ್ರತಂಡದವರು ಈಗ ಅದೇ ಶೀರ್ಷಿಕೆಯನ್ನೇ ಮರು ನಾಮಕರಣವನ್ನು ಮಾಡಿದ್ದಾರೆ. ಒಂದು ವಿಭಿನ್ನವಾದ ವಿಡಿಯೋ ಮೂಲಕ ಸಿನಿಮಾದ ಶೀರ್ಷಿಕೆಯನ್ನು, ಲಹರಿ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಯಿತು. ಇದೆ ಸಮಯದಲ್ಲಿ ದ್ವಾರಕೀಶ್, ತಾವು ನಟಿಸಿದ್ದ ಗುರು ಶಿಷ್ಯರು ಚಿತ್ರವನ್ನು ನೆನಪಿಸಿಕೊಂಡರು. ಹಾಸ್ಯ ಚಕ್ರವರ್ತಿಯೆಂದೇ ಗುರುತಿಸಿಕೊಂಡಿದ್ದ ನರಸಿಂಹ ರಾಜು ಅವರನ್ನು ನೆನೆದು ಭಾವುಕರಾಗಿ ಮಾತನಾಡಿದರು.

ಇದೆ ಸಂದರ್ಭದಲ್ಲಿ ನಟ ಶರಣ್, ತಮ್ಮ ಜೀವನದಲ್ಲಿ ನಡೆದ ಹಳೆ ಘಟನೆಗಳ ಕುರಿತು ಮಾತನಾಡಿದ್ದಾರೆ. ನನಗೆ ಆಗ ಎರಡು ವರ್ಷವಿತ್ತುಗುಬ್ಬಿ ವೀರಣ್ಣ ಸಂಸ್ಥೆಯಲ್ಲಿ ಏಡಿಯೂರು ಸಿದ್ದಲಿಂಗೇಶ್ವರ ಎನ್ನುವ ನಾಟಕ ಪ್ರದರ್ಶನವಾಗುತ್ತಿತ್ತು. ನಾಟಕಕ್ಕೆ ಅಣ್ಣ ದ್ವಾರಕೀಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಾಟಕದಲ್ಲಿ ಗುರುವಿನ ಪಾತ್ರಕ್ಕೆ ನಮ್ಮ ತಂದೆ ಬಣ್ಣ ಹಚ್ಚಿದ್ದು, ಶಿಷ್ಯನ ಪಾತ್ರಕ್ಕೆ ನಾನು ಬಣ್ಣ ಹಚ್ಚಿದ್ದೆ. ಒಂದೆರಡು ಹಾಸ್ಯದ ಸನ್ನಿವೇಶಗಳು ನಾಟಕದಲ್ಲಿ ಬರುತ್ತದೆ. ಶೋ ಮುಗಿದ ನಂತರ ಅಣ್ಣ ನಾಟಕದ ಬಗ್ಗೆ ಮಾತನಾಡಿದ್ದರು. ನಮ್ಮ ತಂದೆಗೆ ದ್ವಾರಕೀಶ್ ಅವರ ಪರಿಚಯವಿತ್ತು. ಶಿಷ್ಯನ ಪಾತ್ರದಲ್ಲಿ ನಟಿಸಿರುವುದು ಯಾರು? ಎಂದು ಅಣ್ಣ ನಮ್ಮ ತಂದೆಗೆ ಕೇಳಿದಾಗ, ನನ್ನ ಮಗ ಎಂದು ಹೇಳಿದರಂತೆ. ನಂತರ ಅಣ್ಣ ನನ್ನನ್ನು ಕರೆದು, ತಮ್ಮ ಕಂಕಣದಲ್ಲಿ ಕೂಡಿಸಿಕೊಂಡು 10 ರೂಪಾಯಿ ನನಗೆ ನೀಡಿದರು. ಇದು ನಾನು ಜೀವನದಲ್ಲಿ  ಪಡೆದ ಮೊಟ್ಟ ಮೊದಲ ಕಾಣಿಕೆಯಾಗಿತ್ತು. ಆಗಲೇ ದ್ವಾರಕೀಶ್ ಅವರು ತೋರಿಸಿದ ಪ್ರೀತಿ, ಹರಿಸಿದಂತಹ ಆಶೀರ್ವಾದ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಈಗ ಅವರ ಮುಖಾಂತರ ನನ್ನ ಸಿನಿಮಾದ ಟೈಟಲ್ ಬಿಡುಗಡೆ ಮಾಡುವ ಅವಕಾಶ ಸಿಕ್ಕಿದ್ದು, ಚಿತ್ರ ತಂಡದ ಸೌಭಾಗ್ಯ ಎಂದು ಶರಣ್ ಹೇಳಿದ್ದಾರೆ.

ಈಗಾಗಲೇ ಶರಣ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಬಂದಿರುವ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈಗ ಜೋಡಿ ಮತ್ತೊಮ್ಮೆ ಜನರನ್ನು ನಗಿಸಲು ಮುಂದಾಗಿದ್ದಾರೆ, ಆದರೆ ಇದರಲ್ಲಿ ಸ್ವಲ್ಪ ಬದಲಾವಣೆ ಇದೆ. ಹಿಂದೆ ಜಡೇಶ್  ಜೆಂಟಲ್ ಮ್ಯಾನ್, ರಾಜಹಂಸ ಸಿನಿಮಾಗಳನ್ನ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ತರುಣ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದು, ನಿರ್ದೇಶನದ ಜವಾಬ್ದಾರಿಯನ್ನು ಜಡೇಶ್ ಗೆ ವಹಿಸಿದ್ದಾರೆ. ಅವನೇ ಶ್ರೀಮನ್ ನಾರಾಯಣ ಖ್ಯಾತಿಯ ಬಿ.ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರಕ್ಕಿದೆ.

 

 

ವರದಿ: ಹೆಚ್.‌ ಶ್ರೀ ಹರ್ಷ