ಚಳಿಗಾಲದಲ್ಲಿ ಅವರೆಕಾಳು ಬಳಸಿ ಹಾಗು ಅಡುಗೆಯ ರುಚಿ ಹೆಚ್ಚಿಸಿ...

ಭಾರತದ ಇತಿಹಾಸದಲ್ಲಿಯೇ ಅತಿ ಪ್ರಾಚೀನ ಎಂಬ ಹೆಗ್ಗಳಿಕೆ ಪಡೆದ ಅವರೆಕಾಳು ವಾಸ್ತವವಾಗಿ ಅಪಾರವಾದ ಪೋಷಕಾಂಶಗಳನ್ನು ಹೊಂದಿದೆ. ಅವರೆಕಾಯಿ ಎಂದ ಕೂಡಲೇ ನೆನಪಾಗುವುದು ಚಳಿಗಾಲ, ಸೊಗಡು. ಅಲ್ಲಲ್ಲಿ ಅವರೆಕಾಯಿ ರಾಶಿ ಹಾಕಿಕೊಂಡು ಮಾರಾಟ ಮಾಡುವ ಚಿತ್ರಣ ಕಣ್ಣ ಮುಂದೆ ಸುಳಿಯುತ್ತದೆ.

ಅವರೆಕಾಯಿ, ತೊಗರಿಕಾಯಿ ಮೊದಲಾದವು ಈ ಚಳಿಗಾಲದಲ್ಲಿ ಬರುತ್ತವೆ. ಅವರೆಕಾಳನ್ನು ಬಳಸಿ ಹಲವಾರು ಅಡುಗೆ ಮಾಡಲಾಗುತ್ತದೆ. ಅವರೆಕಾಳು ಸಾರು, ಪಲ್ಯ ಸಾಮಾನ್ಯ. ಇದರೊಂದಿಗೆ ಅವರೆಕಾಳು ಉಪ್ಪಿಟ್ಟು, ಮಂಡಕ್ಕಿ, ಹಿಚುಕಿದ ಅವರೆಕಾಳಿನ ಅಡುಗೆಗಳು ಸೇರಿ ಹಲವಾರು ಖಾದ್ಯಗಳನ್ನು ಮಾಡಲಾಗುತ್ತದೆ. ಪ್ರತಿ ಅಡುಗೆ, ಆಹಾರದಲ್ಲಿಯೂ ಅವರೆ ಕಾಳಿನ ರುಚಿ ಹೆಚ್ಚುತ್ತದೆ. ಸೀಸನ್ ನಲ್ಲಿ 3 -4 ದಿನಗಳಿಗೊಮ್ಮೆ, ಕೆಲವು ಸಲ ಪ್ರತಿದಿನವೂ ಕೆಲವರ ಮನೆಯಲ್ಲಿ ಅವರೆಕಾಳು ಸಾರು ಕಾಮನ್ ಆಗಿರುತ್ತದೆ.

ಅವರೆಕಾಯಿಯನ್ನು ಅನೇಕ ಕಡೆ ಹೊಲದಲ್ಲಿಯೇ ಬೇಯಿಸಿಕೊಂಡು ಇಲ್ಲವೇ ಸುಟ್ಟು ತಿನ್ನುತ್ತಾರೆ. ಅವರೆಕಾಯಿ ಸೀಸನ್ ನಲ್ಲಿ ಹೊಲಗಳಲ್ಲಿ ಇದಕ್ಕಾಗಿ ಉಪ್ಪು, ಪಾತ್ರೆ, ನೀರು ಸಿದ್ದವಾಗಿರುತ್ತವೆ. ತಿನ್ನಬೇಕೆನಿಸಿದಾಗ, ಒಂದಿಷ್ಟು ಅವರೆಕಾಯಿ ಕಿತ್ತು ತಂದು ಬೇಯಿಸಿಕೊಂಡು ಬೆಂದ ಅವರೆಕಾಯಿಯ ಸುತ್ತ ಕುಳಿತುಕೊಂಡು ತಿನ್ನುವುದೇ ಚೆಂದ.

ಕೆಲವು ಕಡೆಗಳಲ್ಲಿ ವಿಶೇಷವಾಗಿ ಅವರೆಕಾಯಿ ಮೇಳ ನಡೆಯುತ್ತದೆ. ಈಗಾಗಲೇ ಮಾರುಕಟ್ಟೆಗೆ ಅವರೆಕಾಯಿ ಬಂದಿದ್ದು, ಸೊಗಡಿನೊಂದಿಗೆ ರುಚಿಯನ್ನು ಸವಿಯಿರಿ.