ತೀರ್ಥಹಳ್ಳಿ ಎಂದರೆ ದೇವರ ದರ್ಶನವಾಗುವ ಸ್ಥಳ: ಸಿಎಂ ಬೊಮ್ಮಾಯಿ

 

Ranjitha Ramakumar

ಬೆಂಗಳೂರು: ನಿಮ್ಮ ಲಕ್ಷ್ಯ ನಿಮ್ಮ ಮಣ್ಣಿಗೆ ಸಲ್ಲಬೇಕು. ನಿಮ್ಮ ಮಣ್ಣಿನ ಗಿಡಕ್ಕೆ, ಊರಿನ ನೆಲಕ್ಕೆ, ಕಲಿತ ಶಾಲೆಗೆ, ತಂದೆತಾಯಿಗಳಿದ್ದ ಮನೆಗೆ ನ್ಯಾಯ ನೀಡಲು ಮರಳಿ ತೀರ್ಥಹಳ್ಳಿಗೆ ಎಂಬ ಅಭಿಯಾನವನ್ನು ಕೈಗೊಳ್ಳಿರಿ ಎಂದು ಬೆಂಗಳೂರಿನಲ್ಲಿ ನೆಲೆಸಿರುವ ತೀರ್ಥಹಳ್ಳಿ- ಮಲೆನಾಡಿಗರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದರು.

ಏಪ್ರಿಲ್ 10  ಭಾನುವಾರದಂದು  ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ  ಬೆಂಗಳೂರು ನಿವಾಸಿಗಳ  ಸ್ನೇಹ-ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೀರ್ಥಹಳ್ಳಿ ಜನರು ಬುದ್ಧಿವಂತರು. ಈ ಕ್ಷೇತ್ರ ಶ್ರೇಷ್ಠ ಸಾಹಿತಿಗಳನ್ನು, ರಾಜಕಾರಣಿಗಳನ್ನು ರಾಜ್ಯಕ್ಕೆ ನೀಡಿದೆ. ತೀರ್ಥಹಳ್ಳಿ ಎಂದರೆ ದೇವರ ದರ್ಶನವಾಗುವ ಸ್ಥಳ. ದೇವರು ವಾಸಿಸುವ ಸ್ಥಳ ಎಂದು ಬಣ್ಣಿಸಿದರು. 

ಉದ್ಯಾನ ನಗರಿಯಲ್ಲಿ ಸ್ವದೇಶಿ ಮೇಳ

ಗೃಹ ಸಚಿವರಾದ ಆರಗ ಜ್ಞಾನೇಂದ್ರ  ಮಾತನಾಡಿ, ಬೆಳೆಗೆ ಬೆಲೆ ಬಂದಾಗ ಬದುಕು ಹೇಗೆ ಪರಿವರ್ತನೆಯಾಗುತ್ತದೆ ಎನ್ನುವುದಕ್ಕೆ ಇಂದಿನ ತೀರ್ಥಹಳ್ಳಿಯೇ ಸಾಕ್ಷಿ. ಅಡಿಕೆ ಮಲೆನಾಡಿನ ಜನರ ಜೀವನಮಟ್ಟವನ್ನು ಸುಧಾರಿಸಿ, ಗೌರವದ ಜೀವನ  ನೀಡುತ್ತಿದೆ. ಇದೊಂದು ಸಂಭ್ರಮದ ವಿಚಾರ. ಅಂದಿನ ಬಡತನದಲ್ಲಿ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯವಾಗಿ ಅನೇಕರು ಬೆಂಗಳೂರಿಗೆ ಬರುವಂತಾಯಿತು. ಆದರೆ ಇಂದಿನ ಅಡಿಕೆಯ ಧಾರಣೆ ಮಣ್ಣಿನ ಸೆಳೆತ ಇರುವವರಿಗೆ ಊರಿನಲ್ಲೇ ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಹಾಗಾಗಿ ಅನೇಕರು ಬೆಂಗಳೂರಿನಿಂದ ಮತ್ತೆ ತೀರ್ಥಹಳ್ಳಿಯತ್ತ ಮರಳುತ್ತಿದ್ದಾರೆ. ಇದು ಖುಷಿಯ ಸಂಗತಿ ಎಂದರು. 

ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್‌ ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್‌ ಅಶ್ವತ್‌ ನಾರಾಯಣ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ  ಹಾಲಪ್ಪ, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿಗಳ  ರಾಜಕೀಯ ಕಾರ್ಯದರ್ಶಿ ಡಿ. ಎನ್‌ ಜೀವರಾಜ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.