ಕಾಂಗ್ರೆಸ್ ನಲ್ಲಿ ಬಗೆ ಹರಿಯದ ಬಿಕ್ಕಟ್ಟು; ಡಿಕೆಶಿಗೆ ಒಲಿಯುತ್ತ ಅಧ್ಯಕ್ಷ ಪಟ್ಟ
ದಿನೇಶ್ ಗುಂಡೂರಾವ್ ರಾಜೀನಾಮೆಯಿಂದ ತೆರವಾಗಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪಟ್ಟವನ್ನು ಯಾರಿಗೆ ಕಟ್ಟಬೇಕು ಎಂಬ ಗೊಂದಲ ಕಾಂಗ್ರೆಸ್ ಅಧ್ಯಕ್ಷರಲ್ಲಿ ಮೂಡಿದೆ. ರಾಜ್ಯ ಕಾಂಗ್ರೆಸ್ನಲ್ಲಿ ಎರಡು ಬಣಗಳು ಏರ್ಪಟ್ಟಿದ್ದು, ಸಿದ್ದರಾಮಯ್ಯ ಬಣಕ್ಕೆ ಪಟ್ಟ ಕಟ್ಟಬೇಕೆ ಅಥವಾ ಡಿಕೆ ಶಿವಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆ ಎಂಬ ಗೊಂದಲ ಮುಂದುವರೆದಿದೆ. ಈ ಮೂಲಕ ಪಕ್ಷದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇನ್ನು ಕೊಂಚ ಮುಂದುವರೆಯುವ ಸಾಧ್ಯತೆ ಇದೆ.
ಈಗಾಗಲೇ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಹೈಕಮಾಂಡ್, ಈ ಕುರಿತು ಚರ್ಚೆ ನಡೆಸಿದೆ. ಉತ್ತರ ಕರ್ನಾಟಕಕ್ಕೆ ಆದ್ಯತೆ ಕೊಡುವುದರ ಜೊತೆಗೆ ಪ್ರಭಾವಿ ಲಿಂಗಾಯತ ಸಮುದಾಯಕ್ಕೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು. ಈ ಹಿನ್ನೆಲೆಯಲ್ಲಿ ಎಂಬಿ ಪಾಟೀಲ್ ಇದಕ್ಕೆ ಸೂಕ್ತ ವ್ಯಕ್ತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ, ಮೂಲ ಕಾಂಗ್ರೆಸ್ಸಿಗರ ಮತ್ತೊಂದು ಬಣವು ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿಯ ಆಯ್ಕೆಗೆ ನಕಾರ ತೋರಿದ್ದು, ಹೈ ಕಮಾಂಡ್ನಲ್ಲಿ ತಲೆ ನೋವು ತರಿಸಿದೆ. ಇನ್ನು, ಕಾಂಗ್ರೆಸ್ ಆಪತ್ಭಾಂಧವನಂತೆ ಕೆಲಸ ಮಾಡಿದ್ದ ಡಿಕೆ ಶಿವಕುಮಾರ್ ಪರ ಕೂಡ ಹೈ ಕಮಾಂಡ್ ಒಲವು ಹೊಂದಿದೆ. ಈ ಹಿನ್ನೆಲೆ ಹೈ ಕಮಾಂಡ್ ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸಬೇಕು ಎಂಬ ಬಗ್ಗೆ ಗೊಂದಲ ಹೊಂದಿದೆ.