ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿ ಮುಖಭಂಗ ಅನುಭವಿಸಿದ ಚೀನಾ...

ವಾಷಿಂಗ್ಟನ್: ಪಾಕಿಸ್ತಾನದ ಪರವಾಗಿರುವ ಚೀನಾ ದೇಶವು, ಜಮ್ಮು ಮತ್ತು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೊಮ್ಮೆ ಮುಚ್ಚಿದ ಬಾಗಿಲು ಸಭೆ ನಡೆಸುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆಸಿತ್ತು. ಆದರೆ ಅದು ಪುನಃ ಮುಖಭಂಗ ಅನುಭವಿಸಿದೆ.

ಆಫ್ರಿಕಾದ ದೇಶವೊಂದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮುಚ್ಚಿದ ಬಾಗಿಲಿನ ಸಭೆ ನಡೆಸಲಾಗಿತ್ತು. ಈ ವೇಳೆ 'ಯಾವುದೇ ಇತರೆ ವ್ಯಾವಹಾರಿಕ ಅಂಶಗಳ' ಅಜೆಂಡಾ ಅಡಿಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಲು ಚೀನಾ ಉದ್ದೇಶಪೂರ್ವಕ ಪ್ರಯತ್ನ ನಡೆಸಿದೆ. ಆದರೆ ಈ ವಿಚಾರವನ್ನು ಚರ್ಚಿಸಲು ಇದು ಸೂಕ್ತ ಸ್ಥಳವಲ್ಲ ಎಂದು ಜಾಗತಿಕ ಉನ್ನತ ಸಂಸ್ಥೆ ಹೇಳಿದೆ. 

ಚೀನಾ ಹೊರತುಪಡಿಸಿ ಇತರೆ ದೇಶಗಳು ಸಭೆಯ ಬಳಿಕ ಅದು ಅನೌಪಚಾರಿಕ ಪ್ರಸ್ತಾಪ ಎಂದು ಹೇಳಿಕೆ ನೀಡಿವೆ. ಇದರಿಂದ ಕಾಶ್ಮೀರ ವಿವಾದವನ್ನು ಕೆದಕುವ ಮೂಲಕ ಭಾರತ-ಪಾಕಿಸ್ತಾನ ಜಗಳದಲ್ಲಿ ಬಿಸಿ ಕಾಯಿಸಿಕೊಳ್ಳುವ ಚೀನಾ ಪ್ರಯತ್ನ ಪುನಃ ವಿಫಲವಾಗಿದೆ.