ರಶ್ಮಿಕಾ ಮಂದಣ್ಣ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ದಾಳಿ...
ಬೆಂಗಳೂರು: ಕಳೆದ ಮೂರ್ನಾಲ್ಕು ವರ್ಷಗಳಿಂದ ಮನೆ ಮಾತಾಗಿರುವ ಸ್ಯಾಂಡಲ್ವುಡ್ ಬೆಡಗಿ ರಶ್ಮಿಕಾ ಮಂದಣ್ಣ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿರುವ ನಿವಾಸದ ಮೇಲೆ ಟ್ಯಾಕ್ಸಿ ಮೂಲಕ ಆಗಮಿಸಿದ ಅಧಿಕಾರಿಗಳು ನಟಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಾರೆ.
ಐಟಿ ಅಧಿಕಾರಿಗಳು ನಟಿ ರಶ್ಮಿ ಮನೆಯ ಮೇಲೆ ಐಟಿ ದಾಳಿ ಮಾಡಲು ಮೂರು ಕಾರಣಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲನೆಯದಾಗಿ ನಟಿ ರಶ್ಮಿಕಾ ಪಡೆಯುತ್ತಿರುವ ಸಂಭಾವನೆಯ ಬಗ್ಗೆ ತಪ್ಪು ಮಾಹಿತಿ ನೀಡಿರುವುದು. ಜಾಹೀರಾತು ಏಜೆನ್ಸಿಗಳ ಜೊತೆಯೂ ರಶ್ಮಿಕಾ ಷೇರು ವ್ಯವಹಾರ ನಡೆಸುತ್ತಿದ್ದಾರೆ. ಜೊತೆಗೆ ರಶ್ಮಿಕಾ ಟಾಲಿವುಡ್ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಹೀಗಾಗಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಶ್ಮಿಕಾ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
10ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ಮನೆಯಲ್ಲಿ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಶೂಟಿಂಗ್ ಗಾಗಿ ರಶ್ಮಿಕಾ ಹೈದರಾಬಾದಿಗೆ ಹೋಗಿದ್ದಾರೆ. ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ಬಹುಬೇಡಿಕೆಯ ನಟಿಯಾಗಿರುವ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿದ್ದಾರೆ, ಅಂತೆಯೇ ಅವರ ಆದಾಯದಲ್ಲಿ ಹೆಚ್ಚಳವಾಗಿದೆ. ಈ ಎಲ್ಲದರ ದಾಖಲೆಗಳನ್ನು ಪರಿಶೀಲನೆ ನಡೆಸಬೇಕಾಗಿದೆ. ಹಾಗಾಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.