ಶಾಹಿನ್ ಶಾಲೆ ಪ್ರಕರಣ : ವರದಿ ಕೇಳಿದ ಮಕ್ಕಳ ಆಯೋಗ : ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾರ್ಗರೇಟ್ ಆಳ್ವಾ.

ಬೀದರ್ : ಶಾಹಿನ್ ಶಾಲೆಯ ವಾರ್ಷಿಕೋತ್ಸವದಲ್ಲಿ ಮಕ್ಕಳಿಂದ ಸಿಎಎ ವಿರೋಧಿ ನಾಟಕ ಪ್ರದರ್ಶನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಪೊಲೀಸರು ನಾಟಕದಲ್ಲಿ ಭಾಗವಹಿಸಿದ್ದ 10 ವರ್ಷದ ಬಾಲಕಿಯ ತಾಯಿ ಹಾಗೂ ಶಾಲೆಯ ಮುಖ್ಯ ಶಿಕ್ಷಕಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಏನಿದು ಪ್ರಕರಣ......
ಶಾಹಿನ್ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳು ಸಿಎಎ ವಿರೋಧಿ ನಾಟಕ ಪ್ರದರ್ಶಿಸಿದ್ದರು. ನಾಟಕದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ನ್ಯೂಟೌನ್ ಪೋಲೀಸ್ ಠಾಣೆಯಲ್ಲಿ  ದೇಶದ್ರೋಹದ ಆರೋಪದಡಿ ದೂರು  ದಾಖಲಿಕೊಂಡ ಪೊಲೀಸರು ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ಬಾಲಕಿಯ ತಾಯಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವರದಿ ಕೇಳಿದ ಮಕ್ಕಳ ಆಯೋಗ......
ಇನ್ನು ಪ್ರಕರಣ ಸಂಬಂಧ ಪೊಲೀಸರು ಶಾಹಿನ್ ಶಾಲೆಯ ಮಕ್ಕಳನ್ನು ವಿಚಾರಣೆ ನಡೆಸಿದ್ದಾರೆ. ಮಕ್ಕಳ ವಿಚಾರಣೆ ನಡೆಸಿರುವ ಕುರಿತು ಪೊಲೀಸರಿಗೆ ಮಕ್ಕಳ ಆಯೋಗ ವರದಿ ಕೇಳಿದೆ. ಮಕ್ಕಳ ಆಯೋಗದ ಅಧ್ಯಕ್ಷರ ಸೂಚನೆಯ ಮೇರೆಗೆ ಸದಸ್ಯೆ ಜಯಶ್ರೀ ಬೀದರ್ ಗೆ ಆಗಮಿಸಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ನಿಯಮಾವಳಿಯಂತೆ ವಿಚಾರಣೆ ನಡೆಸಿ. ಯಾವುದೇ ಕಾರಣಕ್ಕೂ ಮಕ್ಕಳ ಮೇಲೆ ಒತ್ತಡ ಹಾಕಬಾರದೆಂದು ಸೂಚನೆ ನೀಡಿದರು.

ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಮಾರ್ಗರೇಟ್ ಆಳ್ವ.....
ಇನ್ನು ಶಾಹಿನ್ ಶಾಲೆಯ ಪ್ರಕರಣದಲ್ಲಿ ದೇಶದ್ರೋಹದ ದೂರು ದಾಖಲಾದ ಬಗ್ಗೆ  ಹಾಗೂ  ಪೊಲೀಸರು ವಿಚಾರಣೆ ನಡೆಸುತ್ತಿರುವ ರೀತಿಯ ಕುರಿತು ಅಸಮಧಾನ ವ್ಯಕ್ತ ಪಡಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮಾಜಿ ರಾಜ್ಯಪಾಲೆ ಹಾಗೂ  ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಪತ್ರ ಬರೆದಿದ್ದಾರೆ.

"ರಾಜ್ಯದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿದೆಯೋ ಅಥವಾ ಪೊಲೀಸ್ ಆಡಳಿತವಿದೆಯೋ ನನಗೆ ಅರ್ಥವಾಗುತ್ತಿಲ್ಲ. ಯಾರ ಸೂಚನೆ ಮೇರೆಗೆ ಪೊಲೀಸರು ಶಾಲಾ ಸಿಬ್ಬಂದಿ , ಪೋಷಕರು ಹಾಗೂ ಮಕ್ಕಳಿಗೆ ವಿಚಾರಣೆಯ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಪ್ರಕರಣದ ಬಗ್ಗೆ ನಿಮ್ಮ ಮೌನ ನಿಜಕ್ಕೂ ಆಘಾತಕಾರಿ" ಎಂದು ಪತ್ರದಲ್ಲಿ ಬರೆದಿದ್ದಾರೆ.