ರಾಜ್ ಕೋಟ್ ನಲ್ಲಿ ಇಂದು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
ಶುಕ್ರವಾರ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ತಿರುಗೇಟು ನೀಡಲೇಬೇಕಾದ ಒತ್ತಡ ಹಾಗೂ ಅನಿವಾರ್ಯತೆ ಟೀಮ್ ಇಂಡಿಯಾ ಮೇಲಿದೆ. ಇಲ್ಲವಾದರೆ 3 ಪಂದ್ಯಗಳ ಸರಣಿ ಭಾರತದ ಕೈಜಾರಲಿದೆ. ಇಂದು ನಡೆಯಲಿರುವ ಆಸ್ಟ್ರೇಲಿಯಾ ಎದುರಿನ ಪಂದ್ಯ ಭಾರತಕ್ಕೆ ಮಾಡು ಇಲ್ಲವೆ ಮಡಿ ಪಂದ್ಯವಾಗಲಿದೆ.
ನಾಯಕ ವಿರಾಟ್ ಕೊಹ್ಲಿ ತಮ್ಮ ನೆಚ್ಚಿನ 3ನೇ ಕ್ರಮಾಂಕಕ್ಕೆ ವಾಪಸಾಗಲಿದ್ದು, ಶುಕ್ರವಾರ ಇಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ 2ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತಕ್ಕೆ ಗೆಲುವು ತಂದುಕೊಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ನಡೆಸಿದ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗ ಕೈಕೊಟ್ಟಹಿನ್ನೆಲೆಯಲ್ಲಿ, ಸರಣಿ ಉಳಿಸಿಕೊಳ್ಳಬೇಕಿದ್ದರೆ ವಿರಾಟ್ ಕೊಹ್ಲಿಯಿಂದ ಭರ್ಜರಿ ಪ್ರದರ್ಶನ ಮೂಡಿಬರಬೇಕಿದೆ.
ರೋಹಿತ್ ಶರ್ಮಾ ಇಲ್ಲವೇ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿದರಷ್ಟೇ ಭಾರತಕ್ಕೆ ಗೆಲುವು ಸಿಗಲಿದೆ ಎನ್ನುವಂಥ ಪರಿಸ್ಥಿತಿ ಎದುರಾಗಿದ್ದು, ನಾಯಕ ಹಾಗೂ ಉಪನಾಯಕನ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಮುಂಬೈ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಸಾಧಿಸಿದ ಕಾಂಗರೂ ಪಡೆ, ಭಾರತದಲ್ಲಿ ಸತತ 2ನೇ ಏಕದಿನ ಸರಣಿ ಜಯಿಸುವ ಹುಮ್ಮಸ್ಸಿನಲ್ಲಿದೆ.
ಟೀಂ ಇಂಡಿಯಾ ಪಾಲಿಗೆ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ಅದೃಷ್ಟತಾಣವಲ್ಲ. ಭಾರತ ಇಲ್ಲಿ ಆಡಿರುವ 2 ಏಕದಿನ ಪಂದ್ಯಗಳಲ್ಲೂ ಸೋಲು ಕಂಡಿದೆ. 2013ರಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲಿ 9 ರನ್ ಸೋಲು ಕಂಡಿದ್ದ ಭಾರತ, 2015ರಲ್ಲಿ ದ.ಆಫ್ರಿಕಾ ವಿರುದ್ಧ 18 ರನ್ ಸೋಲು ಅನುಭವಿಸಿತ್ತು.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ