ದಟ್ಟವಾದ ಕೂದಲಿಗಾಗಿ ಕೆಲವು ಮನೆ ಮದ್ದುಗಳು...
ಕೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರಿಗೂ ತುಂಬಾ ಮುಖ್ಯ. ದಟ್ಟವಾದ ಕೂದಲು ಸುಂದರವಾಗಿ ಕಾಣುತ್ತದೆ. ಆದರೆ ಇತ್ತೀಚೆಗೆ ನಾವು ಉಪಯೋಗಿಸುವ ಶಾಂಪೂ ಗಳಲ್ಲಿ ಹಾಗು ಪಾರ್ಲರ್ಗಳಲ್ಲಿ ಬಳಸುವ ರಾಸಾಯನಿಕ ವಸ್ತುಗಳಿಂದ ಕೂದಲಿನ ಆರೋಗ್ಯ ಹದಗೆಡುತ್ತಿದೆ.
ತಲೆಯ ಭಾಗದ ಚರ್ಮದಲ್ಲಿ ತೇವಾಂಶ ಕಡಿಮೆಯಾದಾಗ, ಚರ್ಮ ಒಣಗಿ, ಬಿಳಿಯ ಹೊಟ್ಟು ಸೃಷ್ಟಿಗುತ್ತದೆ. ಇದೇ ಕಾರಣದಿಂದಲೇ ಕೂದಲಿನ ಬುಡ ದುರ್ಬಲಗೊಂಡು, ಕೂದಲು ಉದುರುತ್ತದೆ.
ಇದನ್ನು ಹೊರತು, ದೇಹದಲ್ಲಿ ವಿಟಮಿನ್ ಕೊರತೆ, ಮಾನಸಿಕ ಒತ್ತಡದಿಂದ, ನೀರಿನ ಸಮಸ್ಯೆಯಿಂದ ಹೀಗೆ ಅನೇಕ ಕಾರಣಗಳಿಂದಲೂ ಸಹ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
ಹಾಗಾದರೆ ದಟ್ಟವಾದ ಕೂದಲನ್ನು ಉಳಿಸಿಕೊಳ್ಳಲು ಕೆಲವು ಸಲಹೆಗಳು ಈ ಕೆಳಗಿವೆ:
1.ತಲೆಗೆ ಸರಿಯಾಗಿ ಎಣ್ಣೆ ಹಚ್ಚದಿದ್ದರೂ ಕೂದಲು ಉದುರುತ್ತದೆ. ಇಂದಿನ ಕಾಲದಲ್ಲಿ ತಲೆಗೆ ಎಣ್ಣೆ ಹಚ್ಚಿಕೊಂಡರೆ ಅಂದ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಯುವತಿಯರು ತಲೆಗೆ ಎಣ್ಣೆ ಹಚ್ಚುವುದೇ ಇಲ್ಲ. ಆದರೆ ಇದು ಕೂದಲ ಮೇಲಷ್ಟೇ ಅಲ್ಲ. ನಮ್ಮ ಕಣ್ಣ ಮೇಲೂ ಪರಿಣಾಮ ಬೀರುತ್ತದೆ. ಯವ್ವನದಲ್ಲಿ ಎಣ್ಣೆಹಚ್ಚಿ ತಲೆಕೂದಲ ಆರೋಗ್ಯ ಕಾಪಾಡಿಕೊಳ್ಳದಿದ್ದರೆ, ವೃದ್ಧಾಪ್ಯದಲ್ಲಿ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ.
2.ತೆಂಗಿನಎಣ್ಣೆಗೆ ಸ್ವಲ್ಪ ಮೆಂತೆ ಹಾಕಿ ಕುದಿಸಿ, ಸೋಸಿ ಒಂದು ಬಾಟಲಿಯಲ್ಲಿ ಹಾಕಿಡಿ. ಈ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು.
3.ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ, ಒಂದು ಗಂಟೆ ಬಳಿಕ ತಲೆ ತೊಳೆದುಕೊಳ್ಳಿ.
4.ಮನೆಯಲ್ಲೇ ಎಣ್ಣೆ ತಯಾರಿಸಿ ಬಳಸುವುದರಿಂದ ಕೂದಲಿನ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ಬರೀ ತೆಂಗಿನೆಣ್ಣೆಯ ಬದಲು ಅದರ ಜೊತೆಗೆ ಭ್ರಂಗರಾಜ್ ಎಲೆ, ನೆಲ್ಲಿಕಾಯಿ ಅಥವಾ ಕರಿಬೇವಿನ ಎಲೆ ಸೇರಿಸಿ ಕುದಿಸಿ, ಉಪಯೋಗಿಸಬಹುದು.
5.ಕೂದಲು ದಟ್ಟವಾಗಿ ಬೆಳೆಯಬೇಕೆಂದಲ್ಲಿ ಹರಳೆಣ್ಣೆ ಬಳಸಿ.
6.ಸೀಗೆಕಾಯಿಪುಡಿ, ನೆಲ್ಲಿಕಾಯಿ ಪುಡಿ ನೈಸರ್ಗಿಕ ಶ್ಯಾಂಪೂವಿನಂತೆ ಕೆಲಸ ಮಾಡುತ್ತದೆ. ಆದ್ದರಿಂದ ಇವುಗಳ ಪುಡಿ ಸೇರಿಸಿ ಶ್ಯಾಂಪೂವಿನಂತೆ ಬಳಸಬಹುದು.
7.ಅಂಗಡಿಯಲ್ಲಿ ಸಿಗುವ ರಾಸಾಯನಿಕ ಕಂಡೀಷನರ್ ಬಳಸುವುದರಿಂದ ಕೂದಲಿಗೆ ಹಾನಿಯುಂಟಾಗಬಹುದು. ಆದರೆ ನೈಸರ್ಗಿಕವಾದ ಕಂಡೀಷನರ್ ಬಳಸುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುತ್ತದೆ. ಮೆಹಂದಿ, ಮೊಸರು, ಮೊಟ್ಟೆ, ಬಸಳೆ ಸೊಪ್ಪು ಈ ರೀತಿಯ ಕಡೀಷನರ್‌ನ್ನ ಬಳಸಬಹುದು.
8.ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.
9.ಮೆಂತ್ಯೆ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಅರೆದು ತಲೆಗೆ ಹಚ್ಚಿಕೊಳ್ಳಿ. ಒಂದೆರಡು ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ನೆನೆಸಿದ ಮೆಂತ್ಯೆ ಕಂಡಿಷನರ್‌ನಂತೆ ಕೆಲಸ ಮಾಡುತ್ತದೆ.
10.ಕೂದಲು ನೀಳವಾಗಿ, ಕಪ್ಪಾಗಿ ಬೆಳೆಯಲು ಬರೀ ಹೇರ್ ಪ್ಯಾಕ್, ಹೇರ್ ವಾಶ್ ಮಾಡಿದರೆ ಸಾಲದು ಬದಲಾಗಿ ಒಳ್ಳೆಯ ಆಹಾರವನ್ನೂ ತೆಗೆದುಕೊಳ್ಳಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು. ಮೊಳಕೆ ಬರಿಸಿದ ಕಾಳು, ತಾಜಾ ಹಣ್ಣು-ತರಕಾರಿ, ಹಾಲು- ಮೊಸರು ತಿನ್ನಬೇಕು. ಇದು ಕೂಡ ಕೂದಲ ಮತ್ತು ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ.
11. ಹೇರ್ ಸ್ಟ್ರೇಟ್‌ನರ್, ಹೇರ್ ಡ್ರೈಯರ್ ಹೆಚ್ಚಾಗಿ ಬಳಸುವುದು ಕೂಡ ಕೂದಲುದುರುವಿಕೆಗೆ ಕಾರಣವಾಗುತ್ತದೆ.
ಮನೆಮದ್ದಿನಿಂದ ಕೂದಲು ಉದುರುವಿಕೆಯ ಸಮಸ್ಯೆ ಪರಿಹಾರವಾಗದಿದ್ದಲ್ಲಿ ವೈದ್ಯರ ಬಳಿ ತೋರಿಸುವುದು ಉತ್ತಮ.