ಏಳು ಭಾಷೆಗಳಲ್ಲಿ ತೆರೆಗೆ ಬರಲಿದೆ ಕಬ್ಜ : ಭೂಗತ ಲೋಕದ ದೊರೆಯಾಗಿ ಕಾಣಿಸಿಕೊಳ್ಳಲಿರುವ ಉಪ್ಪಿ....
ಬೆಂಗಳೂರು ಸ್ಯಾಂಡಲ್ ವುಡ್ ನಲ್ಲಿ ತನ್ನ ಶೀರ್ಷಿಕೆ ಹಾಗೂ ಮಾಸ್ ಪೋಸ್ಟರ್ ಗಳಿಂದ ಹೊಸ ಸೆನ್ಸೇಷನ್ ಹುಟ್ಟು ಹಾಕಿರುವ ಆರ್. ಚಂದ್ರು ಹಾಗೂ ರಿಯಲ್ ಸ್ಟಾರ್ ಉಪ್ಪಿ ಕಾಂಬಿನೇಷನ್ ನ ಸಿನಿಮಾ ಕಬ್ಜ ದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ನಿನ್ನೆ ಚಿತ್ರ ತಂಡ ನಗರದ ಮಿನರ್ವ ಮಿಲ್ಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಆರ್.ಚಂದ್ರು , ರಿಯಲ್ ಸ್ಟಾರ್ ಉಪೇಂದ್ರ, ಸಾಹಸ ನಿರ್ದೇಶಕ ರವಿವರ್ಮ ಹಾಗೂ ಛಾಯಾಗ್ರಾಹಕ ಎ.ಜೆ. ಶೆಟ್ಟಿ ಭಾಗವಹಿಸಿದ್ದರು. ನಿರ್ದೇಶಕ ಆರ್.ಚಂದ್ರು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿ ಚಿತ್ರದ ಕುರಿತು ಮಾಹಿತಿ ನೀಡಿದರು.
ಭೂಗತ ದೊರೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಉಪ್ಪಿ...
ಸ್ಯಾಂಡಲ್ ವುಡ್ ನಲ್ಲಿ ಮೊದಲು ಭೂಗತ ಜಗತ್ತಿನ ಕಥೆಗಳಿಗೆ ಓಂಕಾರ ಹಾಕಿದವರೇ ಉಪ್ಪಿ.ಈಗ ಮತ್ತೊಮ್ಮೆ ಕಬ್ಜ ಚಿತ್ರದ ಮೂಲಕ ಭೂಗತ ದೊರೆಯ ಪಾತ್ರದಲ್ಲಿ ಉಪೇಂದ್ರ ಕಾಣಿಸಿಕೊಳ್ಳುತಿದ್ದಾರೆ. ಇನ್ನು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಉಪ್ಪಿ ಮಾತನಾಡುತ್ತಾ ನನಗೆ "ಕಬ್ಜ" ಸಿನಿಮಾ "ಓಂ" ಸಿನಿಮಾದ ನೆನಪು ತರಿಸುತ್ತಿದೆ. ಕಬ್ಜ ಚಿತ್ರದ ಮೇಕಿಂಗ್, ಸೆಟ್ ಎಲ್ಲವೂ ಓಂ ಚಿತ್ರವನ್ನು ಹೋಲುತ್ತದೆ ಎಂದರು.
ಏಳು ಭಾಷೆಗಳಲ್ಲಿ ತೆರೆಕಾಣಲಿರುವ ಕಬ್ಜ ಚಿತ್ರ....
ಕಬ್ಜ ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ಒಟ್ಟು ಏಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮೂರು ಭಾಷೆಗಳಲ್ಲಿ ಚಿತ್ರೀಕರಣ ಹಾಗೂ ನಾಲ್ಕು ಭಾಷೆಗಳಲ್ಲಿ ಚಿತ್ರ ಡಬ್ ಆಗಲಿದೆ. ಕೆಜಿಎಫ್ ಹಾಗೂ ಅವನೇ ಶ್ರೀಮನ್ನಾರಾಯಣ ಚಿತ್ರಗಳು ಪ್ಯಾನ್ ಇಂಡಿಯಾ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿದ್ದವು. ಇದೀಗ ಕಬ್ಜ ಸಹ ಅದೇ ರೀತಿ ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಸೃಷ್ಠಿಸಲು ಹೊರಟಿದೆ.
ಕಬ್ಜ ಚಿತ್ರಕ್ಕೂ ಮೊದಲು ಆರ್.ಚಂದ್ರು ಹಾಗು ಉಪೇಂದ್ರ ಕಾಂಬಿನೇಷನ್ ನಲ್ಲಿ ಬಂದಿರುವ ಬ್ರಹ್ಮ ಹಾಗೂ ಐ.ಲವ್.ಯೂ ಚಿತ್ರಗಳು ಯಶಸ್ಸು ಕಂಡಿದ್ದು, ಈ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.ಇನ್ನು ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನ ಮಾಡುತ್ತಿದ್ದು , ಎ.ಜೆ. ಶೆಟ್ಟಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.